ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾವು ಯಾವುದನ್ನು ಯಾಕಾಗಿ ಮಾಡುತ್ತೇವೆ ಎಂಬ ಸ್ಪಷ್ಟತೆ ಇಲ್ಲದೇ ಅನುಕರಣೆಯ ದಾರಿ ಹಿಡಿದಿರುವುದರಿಂದ ಚಿಂತನಶೀಲತೆ ಕಡಿಮೆಯಾಗುತ್ತಿದೆ. ಮನುಷ್ಯ ತನ್ನ ಶಕ್ತಿಯನ್ನು ಯಂತ್ರಗಳಿಗೆ ವರ್ಗಾಯಿಸುತ್ತಿರುವುದರಿಂದ ಆತ ತನ್ನ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾನೆ ಎಂದು ಶಿಕ್ಷಕ, ಚಿಂತಕ ಅರವಿಂದ ಚೊಕ್ಕಾಡಿ ಹೇಳಿದರು.
ಅವರು ಶನಿವಾರ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಿಂದ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ರಂಗಮಂಟಪದಲ್ಲಿ ಆಯೋಜಿಸಲಾದ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸ್ಫೂರ್ತಿ ಹಸ್ತ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಭಾಷೆಯ ಬಳಕೆಯಲ್ಲಿ ಎಚ್ಚರದಿಂದ ಇರುವ ಜೊತೆಗೆ ಅದನ್ನು ಸ್ವಭಾವ ಸಹಿತ ಅರ್ಥಮಾಡಿಕೊಳ್ಳಬೇಕು. ಭಾಷೆ ನಮ್ಮ ನಡವಳಿಕೆ, ಯೋಚನೆಯನ್ನು ನಿಯಂತ್ರಿಸುತ್ತದೆ. ಭಾಷಾ ಹಿನ್ನೆಲೆಯಲ್ಲಿ ಪಠ್ಯವನ್ನು ಅರ್ಥಮಾಡಿಕೊಂಡರೆ ಕಲಿಕೆಯ ವರ್ತನೆ ಬದಲಾಗುತ್ತದೆ. ನಿಗದಿತ ಚೌಕಟ್ಟಿನೊಳಗೆ ಪಠ್ಯಕ್ರಮ ಇರುವುದರಿಂದ ಕಲಿಯಬೇಕಾದ ಕಲಿಕೆ ಕಡಿಮೆಯಾಗಿ ವಿದ್ಯಾರ್ಥಿಗಳ ನಿಜವಾದ ಸಾಮರ್ಥ್ಯವೂ ಕಡಿಮೆಯಾಗಿದೆ ಎಂದರು.
ಬಾಯಿಪಾಠ ಮಾಡಿಯೂ ಒಳ್ಳೆಯ ಅಂಕ ಬರಬಹುದು. ಆದರೆ ಕಲಿಕೆಯ ಕಾರಣದಿಂದ ಉತ್ತಮ ಅಂಕ ಬಂದರೆ ಅದು ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಕಲಿಕೆಯಿಂದ ಧನಾತ್ಮಕ ಪರಿಣಾಮವಾದಾಗಲೇ ಆ ಪ್ರಕ್ರಿಯೆ ಯಶಸ್ಸು ಕಾಣುತ್ತದೆ ಎಂದರು.
ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟ್ರಮಣ ದೇವಾಡಿಗ ಹೇನಬೇರು ಕಾರ್ಯಕ್ರಮ ಉದ್ಘಾಟಿಸಿದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಬೈಂದೂರು ಸ.ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಪಿ. ನಾಯ್ಕ, ಬೈಂದೂರು ಪಟ್ಟಣ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ಸದಾಶಿವ ಡಿ. ಪಡುವರಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಅನಿತಾ, ಸದಸ್ಯರಾದ ಗಣಪ ಜಿ, ಗೋಪಾಲಕೃಷ್ಣ ಆಲಂದೂರು, ನಾಗಪ್ಪ ದೊಂಬೆ, ಭಾಸ್ಕರ್, ಜಾನೆಟ್, ಕನಕ, ಉಮೇಶ್, ಶಾಲಾ ನಾಯಕ ವಿಲಾಸ್ ಉಪಸ್ಥಿತರಿದ್ದರು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ಕ್ರೀಡಾ ಸಾಧಕಿ ವಿಕಲ ಚೇತನ ವಿದ್ಯಾರ್ಥಿನಿ ಕುಶಿ ಅವರನ್ನು ಸನ್ಮಾನಿಸಲಾಯಿತು. ದತ್ತಿ ನಿಧಿ ಬಹುಮಾನ, ಕ್ರೀಡಾ ಸ್ಪರ್ಧೆಗಳು, ಸಾಹಿತ್ಯಕ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಾಯಿತು.
ಉಪ ಪ್ರಾಂಶುಪಾಲರಾದ ಸಂಧ್ಯಾ ಭಟ್ ಸ್ವಾಗತಿಸಿ ವರದಿ ವಾಚನ ಮಾಡಿದರು. ಸಮಾಜ ವಿಜ್ಞಾನ ಶಿಕ್ಷಕ ಕಮಲಾ ವಿ.ಕೊಡೆಯಾ ವಂದಿಸಿದರು. ಕನ್ನಡ ಭಾಷಾ ಶಿಕ್ಷಕ ದತ್ತಾತ್ರೇಯ ಭಟ್ ದತ್ತಿ ನಿಧಿ ಪುರಸ್ಕೃತರ ಪಟ್ಟಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ್ ಎಸ್. ಕ್ರೀಡಾ ಸಾಧಕರ ಪಟ್ಟಿಯನ್ನು ವಾಚಿಸಿದರು. ಗಣಿತ ಶಿಕ್ಷಕ ಶ್ರೀಧರ ಭಟ್ ಅತಿಥಿಗಳ ಪರಿಚಯ ಮಾಡಿದರು. ಕನ್ನಡ ಭಾಷಾ ಶಿಕ್ಷಕಿ ವೀಣಾ ನಾಯ್ಕ ಸಾಹಿತ್ತಿಕ ಸ್ಪರ್ಧೆಗಳ ಯಾದಿ ವಾಚಿಸಿದರು. ಹಿಂದಿ ಶಿಕ್ಷಕ ರವೀಂದ್ರ ಪಿ. ಕಾರ್ಯಕ್ರಮ ನಿರೂಪಿಸಿದರು.