ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.25: ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಹಾಗೂ ಸಮನ್ವಯ ಸಹಕಾರಿ ಬಳಗ ಎಲ್ಲಾ 13 ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದೆ.
ಸಾಮಾನ್ಯ ಕ್ಷೇತ್ರದಿಂದ ಟಿ. ನಾರಾಯಣ ಹೆಗ್ಡೆ, ಎಮ್. ಎಚ್. ಗುರುದತ್ತ, ಅರುಣ ಕುಮಾರ್, ವಸಂತ ಕುಮಾರ್ ಶೆಟ್ಟಿ, ವೆಂಕ್ಟ ಪೂಜಾರಿ, ಡಿ. ಸದಾಶಿವ ಶೇರುಗಾರ್, ಹೆರಿಯ ದೇವಾಡಿಗ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಚಿಕ್ಕು ಪೂಜಾರಿ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ನಾಗರಾಜ ಶೆಟ್ಟಿ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಶಂಕರ ನಾಯ್ಕ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸತೀಶ್, ಮಹಿಳಾ ಕ್ಷೇತ್ರದಿಂದ ಜ್ಯೋತಿ ಪೂಜಾರಿ, ಎಚ್. ವಿಜಯ ಶೇರುಗಾರ್ ಆಯ್ಕೆಯಾದರು. /ಕುಂದಾಪ್ರ ಡಾಟ್ ಕಾಂ/
ಯಡ್ತರೆ ಬಂಟರ ಭವನದಲ್ಲಿ ಸಂಘದ ಚುನಾವಣೆ ನಡೆದಿದ್ದು ಚುನಾವಣಾ ಅಧಿಕಾರಿಯಾಗಿ, ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್ ಸಿ,ಎಂ ಚುನಾವಣೆಯನ್ನು ನಡೆಸಿಕೊಟ್ಟರು.
ಸದಸ್ಯರ ಮತದಾನದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಗುರುರಾಜ ಗಂಟಿಹೊಳೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಬಹುಪಾಲು ಸ್ಪರ್ಧಿಸಿದ್ದರಿಂದ ಎರಡು ಪಕ್ಷಗಳ ಅಧ್ಯಕ್ಷರುಗಳು, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸೇರಿದಂತೆ ರಾಜಕೀಯ ಮುಖಂಡರು ಚುನಾವಣಾ ಸಂದರ್ಭ ಹಾಜರಿದ್ದರು.