ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೆಲಾಂಗಣ ರಾಜಧಾನಿ ನಗರ ಹೈದರಾಬಾದಿನಲ್ಲಿ ಮಾ. 30 ರಂದು ನಡೆಯಲಿರುವ ಕೊಂಕಣಿ ಬಂಧುಗಳ ’ಯುಗಾದಿ ಸಮ್ಮೇಳನ 2025’ ಕಾರ್ಯಕ್ರಮದಲ್ಲಿ ಈ ಬಾರಿ ’ಆಮ್ಮಿ ಆನಿ ಆಮ್ಚಿಗೆಲೆʼ (ನಾವು ಮತ್ತು ನಮ್ಮವರು) ವಿಷಯವಾಗಿ ಉಪನ್ಯಾಸಕ್ಕೆ ಚಿತ್ರನಟ ಜಾದೂಗಾರ ಓಂಗಣೇಶ್ ಉಪ್ಪುಂದ ಅವರನ್ನು ಆಹ್ವಾನಿಸಲಾಗಿದೆ.
ಕನ್ನಡ ಕೊಂಕಣಿ ಭಾಷೆಗಳಲ್ಲಿ ಸಂಸ್ಕೃತಿ ಹಾಗೂ ಜೀವನಮೌಲ್ಯದ ಕುರಿತು ಉತ್ತಮ ವಾಗ್ಮಿಯಾಗಿ, ಹಲವು ಪ್ರವಾಸ ಕಥನ ಅಂಕಣ ಬರಹಗಳಲ್ಲದೇ ನಾಟಕ ಅನುವಾದಕರಾಗಿ ಕೊಂಕಣಿ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿಯಾಗಿ ಮಾನ್ಯರಾದ ಓಂಗಣೇಶ್ ತಮ್ಮ 45 ದೇಶದ ಪ್ರವಾಸಾನುಭವ ಹಾಗೂ ಸುದೀರ್ಘ ಸಾಂಸ್ಕೃತಿಕ ಹಿನ್ನೆಲೆಯಿಂದ ಹೈದರಾಬಾದಿನ ಈ ಯುಗಾದಿ ಸಮಾರಂಭಕ್ಕೆ ವಿಶೇಷ ಉಪನ್ಯಾಸಕರಾಗಿ ಗೌರವ ಪಡೆದಿದ್ದಾರೆ.
ತಮ್ಮ ಮೂಲ ಪರಂಪರೆ ಭಾಷೆ ಸಂಸ್ಕೃತಿಗಳನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ 1964ರಲ್ಲಿ ಅಸ್ತಿತ್ವಕ್ಕೆ ಬಂದ ’ಹೈದರಾಬಾದ್ ಕೊಂಕಣಿ ಅಸೋಷಿಯೇಷನ್’ಪ್ರತಿವರ್ಷ ಆಚರಿಸಿಕೊಂಡು ಬಂದ ಈ ಯುಗಾದಿ ಉತ್ಸವ ಆಚರಣೆ ಈ ಸಾರಿ ಅಲ್ಲಿನ ಅಬಿಡ್ಸ್ ತಾಜಮಹಲ್ ಹೋಟೇಲ್ ಎರಡನೇ ಅಂತಸ್ತಿನ ಸಭಾ ಭವನದಲ್ಲಿ ಜರುಗಲಿದೆ.
ಕೊಂಕಣಿ ಅಸೋಷಿಯೇಷನ್ ಅಧ್ಯಕ್ಷ ವಾಮನ್ ರಾವ್ ಅವರ ಸಾರಥ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಸಂಜೆ ತಂತ್ರಿ ವಸಂತ ಭಟ್ ಅವರಿಂದ ಪಂಚಾಂಗ ಶ್ರವಣ ನಡೆಯಲಿದ್ದು ನಂತರ 45 ನಿಮಿಷದ ಉಪನ್ಯಾಸ ಬಳಿಕ ಮಿಥಿಲಾ ಸೌತೆಕಲ್ ಅವರ ಸಂಗೀತ ಕಾರ್ಯಕ್ರಮ ಜರುಗಲಿದೆ.
ರಾತ್ರಿ ಭೋಜನದೊಂದಿಗೆ ಸಮಾರಂಭ ಕೊನೆಯಾಗಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ತೃಪ್ತಿ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.