ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಡಿಪಾರ್ಟ್ಮೆಂಟ್ ಹಾಗೂ ಕುಂದಾಪುರದ ಸ್ಪರ್ಧಾ ಸಾರಥಿ ಅಕಾಡೆಮಿ ಇವುಗಳ ಜಂಟಿ ಆಶ್ರಯದಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ಕಾರ್ಯಾಗಾರ ಕಾಲೇಜಿನಲ್ಲಿ ನಡೆಯಿತು.
ಮುಖ್ಯ ಅತಿಥಿ ಉಪ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪಾಟೀಲ್ ಮಾತನಾಡಿ, ಹೆತ್ತವರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಕ್ರಿಯಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪದವಿ ವ್ಯಾಸಂಗದ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ನಿರಂತರ ತರಬೇತಿಯನ್ನು ಪಡೆದುಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಅವರು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಬಿ.ಕಾಂ. ಪದವಿಯ ಜೊತೆ ಪ್ರತಿ ಸೆಮಿಸ್ಟರ್ನಲ್ಲಿ ವಿದ್ಯಾರ್ಥಿಗಳಿಗೆ ಸಿಬ್ಬಂದಿ ಆಯ್ಕೆ ಆಯೋಗದ ಕುರಿತು ಬೋಧನೆ ನಡೆಸಲಾಗುವುದು. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಗಳಿಗೆ ಹೋಗುವಂತೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಿರಂತರ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದರು.
ಇದೇ ಸಂದರ್ಭ ಹೆಗ್ಗುಂಜೆ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಶೆಟ್ಟಿ, ಬೆಳ್ವೆ ಗ್ರಾಮ ಪಂಚಾಯತ್ನ ಕಾರ್ಯದರ್ಶಿ( ಶ್ರೇಣಿ -1) ಮಮತಾ ಶೆಟ್ಟಿ ಹಾಗೂ ಉಡುಪಿಯ ತೋಟಗಾರಿಕೆ ಇಲಾಖೆಯ ದ್ವಿತೀಯ ದರ್ಜೆಯ ಸಹಾಯಕ ವಿಶ್ವನಾಥ್ ಶೆಟ್ಟಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜಿನ ಉಪ ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ಪ್ಲೇಸ್ಮೆಂಟ್ ಸಂಯೋಜಕರು ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ಸ್ಪರ್ಧಾ ಸಾರಥಿ ಅಕಾಡೆಮಿಯ ಪ್ರವರ್ತಕ ಆದರ್ಶ ಕೆಲ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಸಂಸ್ಥೆಯ ಪ್ಲೇಸ್ಮೆಂಟ್ ಆಫೀಸರ್ ತಿಮ್ಮಪ್ಪ ಡಿಎಸ್ ಸ್ವಾಗತಿಸಿ, ಪ್ಲೇಸ್ಮೆಂಟ್ ಸಂಯೋಜಕರು ಪ್ರೀತಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.