ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ಆಶ್ರಯದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಇವರ ಸಹಭಾಗಿತ್ವದೊಂದಿಗೆ ಅಂಡರ್ 19 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ವಿಕ್ರಂ ಟ್ರೋಫಿ – 2025 ಎಪ್ರಿಲ್ 21ರಿಂದ 27ರವರೆಗೆ ಇಲ್ಲಿನ ಗಾಂಧಿ ಮೈದಾನದಲ್ಲಿ ಜರುಗಲಿದ್ದು ಸರ್ವ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ವಿಕ್ರಂ ಕ್ರಿಕೆಟ್ ಕ್ಲಬ್ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ನಾಗರಾಜ ಶೆಟ್ಟಿ ಹೇಳಿದರು.
ಅವರು ಬೈಂದೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 1975ರಲ್ಲಿ ಲೆದರ್ ಬಾಲ್ ಆಟವಾಡುವ ಯುವಕರ ತಂಡದಿಂದ ಆರಂಭವಾದ ಸಂಸ್ಥೆ ಮುಂದೆ ಟೆನ್ನಿಸ್ ಬಾಲ್ ಕ್ರಿಕೆಟ್ ಆಟವನ್ನು ನೆಚ್ಚಿಕೊಂಡು ಜಿಲ್ಲೆಯಲ್ಲಿಯೇ ಪ್ರಥಮ ಭಾರಿಗೆ ನಗದು ಬಹುಮಾನವನ್ನು ಒಳಗೊಂಡ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿತ್ತು. ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಸೇರಿದಂತೆ ಹತ್ತು ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪಾರಿತೋಷಕಗಳನ್ನು ಪಡೆದಿದೆ. ಕಳೆದ ಎರಡು ವರ್ಷಗಳಿಂದ ಲೆದರ್ ಬಾಲ್ ಕ್ರಿಕೆಟ್ ತರಬೇತಿಯನ್ನು ಆರಂಭಿಸಿ ಯುವ ಆಟಗಾರರನ್ನು ಹುಟ್ಟುಹಾಕುತ್ತಿದೆ. ಇದೀಗ ಬೈಂದೂರು ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ ಎಂದರು.

ವಿಕ್ರಂ ಕ್ರಿಕೆಟ್ ಕ್ಲಬ್ ಅಧ್ಯಕ್ಷ ದಿನೇಶ್ ಗಾಣಿಗ ಮಾತನಾಡಿ, ಬೈಂದೂರಿನಲ್ಲಿ ನಿಯಮಿತವಾಗಿ 2 ವರ್ಷಗಳಿಂದ ನಿಯಮಿತವಾಗಿ ಲೆದರ್ ಬಾಲ್ ಕ್ರಿಕೆಟ್ ತರಬೇತಿ ನೀಡಲಾಗುತ್ತಿದೆ. ಪಂದ್ಯಾಟ ಆಯೋಜಿಸುವ ಮೂಲಕ ಬೈಂದೂರಿನ ಕ್ರೀಡಾ ಪ್ರತಿಭೆಗಳನ್ನು ಪರಿಚಯಿಸುವ ಉದ್ದೇಶ ಹೊಂದಿದ್ದೇವೆ. ಇಲ್ಲಿ ಆಟವಾಡಿದವರು ರಾಜ್ಯಮಟ್ಟದಲ್ಲಿ ಆಟವಾಡಬೇಕು ಎಂಬುದು ನಮ್ಮ ಅಭಿಲಾಷೆ. ಹಾಗಾಗಿ ಉಡುಪಿ ಜಿಲ್ಲೆಯ ಇಂಟರ್ ಕ್ಯಾಂಪಸ್ ಅಕಾಡೆಮಿ ಆಟಗಾರರಿಗಾಗಿ ಪಂದ್ಯಾಟ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವ ಸಲಹೆಗಾರರಾದ ಜಯಾನಂದ ಹೋಬಳಿದಾರ್, ಕಾರ್ಯದರ್ಶಿ ರಾಜೇಶ್ ಆಚಾರ್, ಸದಸ್ಯ ಗಣೇಶ್ ಪರಮಾನಂದ ಉಪಸ್ಥಿತರಿದ್ದರು.