ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಯೊಂದು ಮಗುವು ಪ್ರತಿಭೆಯ ಕಣಜದಂತೆ. ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಿದರೆ ಆ ಪ್ರತಿಭೆ ಬೆಳಕನ್ನು ಕಂಡು ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಹೇಳಿದರು.
ಅವರು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ. ಯು. ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆದ ಮಂಥನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದರೆ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಇಂದು ಯಕ್ಷಗಾನ ಮುಂತಾದ ಕಲೆಯಲ್ಲಿ ಆಸಕ್ತಿಯನ್ನು ಹೊಂದಿರುವವರು ಸಾಕಷ್ಟು ಸಾಧನೆ ಮಾಡಿ ಯಶಸ್ಸನ್ನು ಆರ್ಥಿಕ ಸದೃಢತೆಯನ್ನು ಹೊಂದುತ್ತಿದ್ದಾರೆ. ಹಾಗಾಗಿ ಕಲಾ ಪ್ರಕಾರಗಳು ಕೂಡ ಬದುಕನ್ನು ಕಟ್ಟಿಕೊಡುತ್ತವೆ ಎಂದರೆ ತಪ್ಪಾಗಲಾರದು.
ಕಲೆ ಮತ್ತು ಕಲಾವಿದರನ್ನು ಗುರುತಿಸುವ, ಪ್ರೋತ್ಸಾಹಿಸುವ ಕೆಲಸವನ್ನು ಹೆಚ್ಚಾಗಿ ವಿದ್ಯಾಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ ಮತ್ತು ಅಭಿನಂದನೀಯ. ಇದು ಮಕ್ಕಳಿಗೆ ಹೊಸ ಪ್ರೇರಣೆಯನ್ನು ಸ್ಫೂರ್ತಿಯನ್ನು ತುಂಬಿದಂತಾಗುತ್ತದೆ. ನಾವು ನಡೆಸಿದ ಬೇಸಿಗೆ ಶಿಬಿರ ಮಂಥನದಲ್ಲಿ ಪಾಲ್ಗೊಂಡ ಮಕ್ಕಳೆಲ್ಲರೂ ಇಲ್ಲಿ ಕಲಿಸಿದ ಚಟುವಟಿಕೆಗಳನ್ನು ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳಲಿ ಮತ್ತು ಆ ಕುರಿತು ಜ್ಞಾನ ಮತ್ತು ಆಸಕ್ತಿಯನ್ನು ಹೊಂದಲಿ ಎಂದರು.

ಸುಜ್ಞಾನ ಎಜುಕೇಶನಲ್ ಕೃಷ್ಣ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ “ನಮ್ಮ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಮುಂದೆ ಭಾರತದ ಉತ್ತಮ ಪ್ರಜೆಗಳಾಗಲಿ. ಇಲ್ಲಿ ಕಲಿಸಿದ ಹತ್ತು ಹಲವು ಚಟುವಟಿಕೆಗಳು ಕೌಶಲಗಳು ಅವರಿಗೆ ಸದಾ ಸ್ಪೂರ್ತಿ ತುಂಬಲಿ. ಇಲ್ಲಿ ಅವರು ಕಲಿತ ಹತ್ತಾರು ಚಟುವಟಿಕೆಗಳಲ್ಲಿ ಒಂದನ್ನಾದರೂ ಅವರು ಜೀವನದಲ್ಲಿ ಅಳವಡಿಸಿಕೊಂಡಾಗ “ಮಂಥನ” ಶಿಬಿರ ಆಯೋಜನೆಯು ಸಾರ್ಥಕ ಎಂದೆನಿಸುತ್ತದೆ ” ಎಂದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ “ನಮ್ಮ ಬೇಸಿಗೆ ಶಿಬಿರ ಮಂಥನ ಆಯೋಜನೆಯ ಉದ್ದೇಶ ಸಮಾಜ ಪ್ರೀತಿಯೇ ಹೊರತು ಯಾವುದೇ ಸ್ವಾರ್ಥಕ್ಕಾಗಿ ಅಲ್ಲ. ಇಂದಿನ ಮಕ್ಕಳು ಮುಂದೆ ದೇಶದ ಆಸ್ತಿ ಸಂಪನ್ಮೂಲ ಆಗಿರುವುದರಿಂದ ಅವರನ್ನು ಮಾನಸಿಕ ಸದೃಢರನ್ನಾಗಿ ಮಾಡುವುದು ಬಹಳ ಮುಖ್ಯ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಅವರಿಗೆ ಬೇಸಿಗೆ ಶಿಬಿರದಲ್ಲಿ ನೀಡುವ ಕೌಶಲಗಳು,ತರಬೇತಿಗಳು ಉಪಯೋಗಕ್ಕೆ ಬರುತ್ತವೆ. ಹಾಗಾಗಿ ಸದೃಢ ಭಾರತವನ್ನು ನಿರ್ಮಿಸುವಲ್ಲಿ ಪಠ್ಯೇತರ ಚಟುವಟಿಕೆಗಳ ಪಾತ್ರವು ಮುಖ್ಯವಾಗುತ್ತದೆ ” ಎಂದರು.
ವೇದಿಕೆಯಲ್ಲಿ ಕೋಳಗಿ ಕೊಟ್ರೇಶ್ ಕೂಡ್ಲಿಗಿ, ಸುಜ್ಞಾನ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ. ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಯೋಗಾಸನ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಸೃಷ್ಟಿ ಕೆ. ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಕೊಟ್ರೇಶಿ ಕೂಡ್ಲಗಿ ಅವರ ಹಾಸ್ಯ ಕಾರ್ಯಕ್ರಮ ಹೊಸ ಲೋಕವನ್ನೇ ಸೃಷ್ಟಿಸಿದಂತಾಗಿ ಮಕ್ಕಳು ಮತ್ತು ಪೋಷಕರು ನಗುವಿನ ಅಲೆಯಲ್ಲಿ ತೇಲಾಡಿದರು ಮತ್ತು ಸಂಸ್ಥೆಯ ಮತ್ತು ಬೇಸಿಗೆ ಶಿಬಿರದ ಕುರಿತು ಪ್ರಶಂಸೆಯ ನುಡಿಗಳನ್ನಾಡಿದರು.
ಗಮನ ಸೆಳೆದ ಯೋಗ ಪ್ರದರ್ಶನ:
ಸಂಗೀತ, ನೃತ್ಯ, ಕ್ರೀಡೆ, ಯೋಗ ಮುಂತಾದ ಹಲವು ವಿಭಾಗಗಳಲ್ಲಿ ಸಾದ್ಜನೆಗೈದಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ,ಯೋಗಾಸನ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಹುಮಾನ, ಪ್ರಶಸ್ತಿ ಪಡೆದಿರುವ ದಾವಣಗೆರೆಯ ಸೃಷ್ಟಿ ಕೆ.ವೈ.ಅವರಿಂದ ಯೋಗಾಸನ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಸಂಗೀತದ ಸ್ವರಗಳ ಜೊತೆ ಪ್ರಸ್ತುತಪಡಿಸಿದ ಯೋಗಾಸನದ ವಿವಿಧ ಆಸನಗಳು ನೆರೆದಿದ್ದ ಸಾವಿರಾರು ಪೋಷಕರು ಹುಬ್ಬೇರಿಸುವಂತೆ, ಕಿರಿಯ ವಿದ್ಯಾರ್ಥಿನಿಯ ಎತ್ತರದ ಸಾಧನೆಯನ್ನು ಪ್ರಶಂಸಿಸುವಂತೆ ಮಾಡಿತು.ಎರಡು ಸಾವಿರಕ್ಕೂ ಹೆಚ್ಚು ಜನ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿ ಸಮಾರಂಭವನ್ನು ಕಣ್ತುಂಬಿಸಿಕೊಂಡರು.
ನಗೆಯ ಹೊನಲು ಹರಿಸಿದ ಕೊಟ್ರೇಶ್ ಅವರ ಹಾಸ್ಯ ಸಂಜೆ ಸಮಾರೋಪ ಸಮಾರಂಭದಲ್ಲಿ ನೆರೆದಿದ್ದ ಅಸಂಖ್ಯಾತ ಪೋಷಕರನ್ನು ನಗೆಯ ನಾವೆಯಲ್ಲಿ ತೇಲಿಸಿ ಆನಂದದ ಮಳೆ ಸುರಿಸಿದ್ದು ಜನಪ್ರಿಯ ಹಾಸ್ಯ ಕಲಾವಿದ ಕೊಟ್ರೇಶಿ ಅವರ ಹಾಸ್ಯಸಂಜೆ. ತನ್ನ ರಸವೋತ್ತಾದ ಮಾತು,ನವಿರಾದ ಹಾಸ್ಯ ಮತ್ತು ಸುಶ್ರಾವ್ಯವಾದ ಹಾಡುಗಳ ಮೂಲಕ ಕಲಾವಿದ ಕೊಟ್ರೇಶಿ ಅವರು ನೆರೆದಿದ್ದ ಸಾವಿರಾರು ಪೋಷಕರು ಮತ್ತು ಮಕ್ಕಳನ್ನು ಹೊಸ ಲೋಕಕ್ಕೆ ಕೊಂಡೊಯ್ದರು.ದಿನ ನಿತ್ಯದ ಅತ್ಯಗತ್ಯವಾದ ಮೌಲ್ಯಗಳನ್ನು ಹಾಸ್ಯದ ಮೂಲಕ ಪ್ರವಹಿಸಿದ ರೀತಿ ಅದ್ಭುತವಾಗಿತ್ತು ಮತ್ತು ಗಮನೀಯವಾಗಿತ್ತು.
ಮಂಥನ- ಮಕ್ಕಳು ಮತ್ತು ಪೋಷಕರ ಸಂಭ್ರಮ:
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಪೋಷಕರ ಮುಖದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು. ಪೋಷಕರು ಮತ್ತು ಮಕ್ಕಳು ಒಂದು ವಾರ ಅತ್ಯಂತ ಯಶಸ್ವಿಯಾಗಿ ನಡೆದ ಮಂಥನ ಬೇಸಿಗೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಕೆಲವು ಪೋಷಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತ,ಅತ್ಯುತ್ತಮವಾದ ಶಿಬಿರ ಇದಾಗಿದ್ದು,ಊಟ,ಉಪಹಾರ,ಸಂಚಾರ ವ್ಯವಸ್ಥೆ, ಮಕ್ಕಳ ಪಾಲನೆ,ಅತಿಥಿ ಸತ್ಕಾರ,ತರಬೇತಿ ಕಾರ್ಯಾಗಾರಗಳು ಎಲ್ಲವೂ ಉತ್ತಮವಾಗಿದ್ದು ಒಟ್ಟಿನಲ್ಲಿ ಒಂದು ಅತ್ಯುತ್ತಮ ಗುಣಮಟ್ಟದ ಶಿಬಿರವಾಗಿತ್ತು ಮತ್ತು ಒಂದು ಸಾವಿರಕ್ಕೂ ಅಧಿಕ ಮಕ್ಕಳನ್ನು ಸೇರಿಸಿಕೊಂಡು ಶಿಬಿರ ನಡೆಸುವುದು ಸವಾಲಿನ ಸಂಗತಿಯಾಗಿದ್ದು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದು ಅಭಿನಂದನೀಯ ಎಂದರು.
ಶಿಬಿರದ ಕುರಿತು ಕೆಲವು ವಿದ್ಯಾರ್ಥಿಗಳು ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ ಇದೊಂದು ಅದ್ಭುತ ಅನುಭವ ಕೊಟ್ಟ ಅತ್ಯುತ್ತಮ ಶಿಬಿರವಾಗಿದ್ದು ಇಲ್ಲಿನ ಎಲ್ಲಾ ವ್ಯವಸ್ಥೆಯು ಉತ್ತಮವಾಗಿತ್ತು. ಅದರಲ್ಲಿಯೂ ತಿಂಡಿ ಮತ್ತು ಊಟ ವ್ಯವಸ್ಥೆವು ಅತ್ಯುತ್ತಮವಾಗಿತ್ತು,ಮೊದಲ ದಿನವೇ ನೀಡಿದ ಮಸಾಲೆ ದೋಸೆ ಬಹಳ ರುಚಿಕರವಾಗಿದ್ದು ಶಿಬಿರದ ನೆನಪನ್ನು ಸದಾ ಉಳಿಸುವಂತಿತ್ತು.ಎಲ್ಲಾ ತರಬೇತಿಗಳು ಉತ್ತಮವಾಗಿತ್ತು ಅದರಲ್ಲಿಯೂ ನೃತ್ಯ ತರಬೇತಿ, ಅಗ್ನಿಶಾಮಕ ದಳದ ಪ್ರಾತ್ಯಕ್ಷಿಕೆ, ಬೂಟ್ ಕ್ಯಾಂಪ್ ಹೆಚ್ಚು ಖುಷಿ ಕೊಡುವಂತದ್ದು ಮತ್ತು ನೆನಪಿನಲ್ಲಿ ಉಳಿಯುವಂತದ್ದು.ಇಂತಹ ಉತ್ತಮ ಶಿಬಿರ ಆಯೋಜಿಸಿದ ಸಂಸ್ಥೆಯವರಿಗೆ ವಂದನೆಗಳು. ಇಂತಹ ಶಿಬಿರ ಮುಂದೆಯೂ ಅಯೋಜನೆಯಾಗಲಿ ಎಂದರು.
ಶಿಕ್ಷಕಿ ಪ್ರೇಮ ಸ್ವಾಗತಿಸಿ, ಸಂಸ್ಕೃತ ಶಿಕ್ಷಕ ರಜತ್ ಭಟ್ ಕಾರ್ಯಕ್ರಮ ನಿರೂಪಿಸಿದರು.















