ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಈ ಪೈಕಿ ತಂದೆ ಮತ್ತು ಮಗ ಮೃತಪಟ್ಟಿದ್ದು, ತಾಯಿಯ ಪರಿಸ್ಥಿತಿ ಗಂಭೀರವಾಗಿದೆ.

ಸಾಲಬಾಧೆಯಿಂದ ನೊಂದಿದ್ದ ಕುಟುಂಬ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದೆ. ಮೃತರನ್ನು ಕಂಚುಗಾರುಬೆಟ್ಟು ನಿವಾಸಿ ಮಾಧವ ದೇವಾಡಿಗ (56), ಹಾಗೂ ಅವರ ಮಗ ಪ್ರಸಾದ್ ದೇವಾಡಿಗ (22) ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ತಾರಾ ದೇವಾಡಿಗ ಅವರನ್ನುಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಂದೆ ಮತ್ತು ಮಗ ಆತ್ಮಹತ್ಯೆಗೆ ಶರಣಾಗಿರುವುದನ್ನು ತಿಳಿದ ತಾಯಿ, ತಾರಾ ದೇವಾಡಿಗ ಅವರು ಬಾವಿಗೆ ಹಾರಿದ್ದು, ಅವರ ಆಕ್ರಂದನದ ಧ್ವನಿ ಕೇಳಿದ ಸ್ಥಳೀಯ ನಿವಾಸಿಗಳಾದ ಸಂತೋಷ್ ಶೆಟ್ಟಿ, ಶ್ರೀನಾಥ್ ಶೆಟ್ಟಿ ಹಾಗೂ ಸ್ಥಳೀಯರು ರಕ್ಷಣೆಗೆ ಧಾವಿಸಿದರು. ಮನೆಯಲ್ಲಿ ಡೆತ್ ನೋಟ್ ದೊರಕಿದ್ದು ಬಡ ಕುಟುಂಬಕ್ಕೆ ಸಾಲಬಾಧೆ ಕಾಡುತ್ತಿರುವುದರಿಂದ ಮರ್ಯಾದೆಗಾಗಿ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಮಾಧವ ದೇವಾಡಿಗ ಅವರು ಅಂಕದಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮೃತ ದೇಹವನ್ನು ಮೇಲಕ್ಕೆತ್ತಲಾಗಿದೆ. ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
ಗಮನಿಸಿ: ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ಕಠಿಣ ಸಂದರ್ಭದಲ್ಲಿ ನಿಮ್ಮ ಬಂಧುಗಳು ಹಾಗೂ ಆತ್ಮೀಯರೊಂದಿಗೆ ಮಾತನಾಡಿ. ಆಪ್ತಸಮಾಲೋಚಕರನ್ನು ಭೇಟಿಯಾಗಿ.