ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪತಿ ಮತ್ತು ಪುತ್ರನ ಅಗಲಿಕೆಯ ನೋವಿನಿಂದ ಮನನೊಂದ ಮಹಿಳೆಯೊಬ್ಬರು ವಿಷಪ್ರಾಶನ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ತೆಕ್ಕಟ್ಟೆಯ ಗ್ರಾಮ ಪಂಚಾಯತ್ ಸಮೀಪದಲ್ಲಿ ಸಂಭವಿಸಿದೆ. ತಾರಾ ದೇವಾಡಿಗ (55) ಮೃತಪಟ್ಟವರು.
ತೆಕ್ಕಟ್ಟೆಯ ಮಲ್ಯಾಡಿ ರಸ್ತೆಯಲ್ಲಿನ ದೂರವಾಣಿ ಕೇಂದ್ರ ಕಚೇರಿಯ ಸಮೀಪದಲ್ಲಿನ ಬಾಡಿಗೆ ಮನೆಯಲ್ಲಿ ಪತಿ ಹಾಗೂ ಪುತ್ರನೊಂದಿಗೆ ತಾರಾ ವಾಸವಾಗಿದ್ದರು. ಮೇ.15ರಂದು ಮನೆಗೆ ಆಧಾರವಾಗಿದ್ದ ಪತಿ ಮಾಧವ ದೇವಾಡಿಗ (60) ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ರಕ್ಷಣೆಗೆ ಧಾವಿಸಿದ ಮಗ ಪ್ರಸಾದ್ ದೇವಾಡಿಗ (23) ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಸಂದರ್ಭದಲ್ಲಿ ಪತಿ ಹಾಗೂ ಮಗನನ್ನು ರಕ್ಷಿಸಲು ಬಾವಿಗೆ ಹಾರಿದ ತಾರಾ ದೇವಾಡಿಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಪತಿ ಹಾಗೂ ಪುತ್ರನ ಅಗಲಿಕೆಯಿಂದ ತೀವ್ರವಾಗಿ ಮನನೊಂದಿದ್ದ ಅವರು ಸುಮಾರು ಐದು ತಿಂಗಳ ಬಳಿಕ ತೆಕ್ಕೆಟ್ಟೆ ಗ್ರಾಮ ಪಂಚಾಯತ್ ಕಚೇರಿಯ ಸಮೀಪದಲ್ಲಿ ವಿಷ ಪ್ರಾಶನ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ► ತೆಕ್ಕೆಟ್ಟೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಯತ್ನ: ತಂದೆ-ಮಗನ ಸಾವು, ತಾಯಿ ಸ್ಥಿತಿ ಗಂಭೀರ – https://kundapraa.com/?p=85206 .















