ಬೈಂದೂರು: ಆಲ್ಲಿನ ಕಾಲೋನಿ ಜನರಿಗೆ ಕುಡಿಯಲು ನೀರಿಲ್ಲ, ವಾಸಿಸಲು ಸ್ವಂತದ್ದು ಎಂದು ಹೇಳಿಕೊಳ್ಳುವ ಮನೆಯೂ ಇಲ್ಲ. ದಶಕವೇ ಕಳೆದರೂ ಈ ನೂರಾರು ಕುಟುಂಬಗಳಿಗಿನ್ನೂ ಮೂಲಭೂತ ಸೌಕರ್ಯ ಹಾಗೂ ಹಕ್ಕುಪತ್ರವೆನ್ನವುದು ಕನಸಾಗಿಯೇ ಉಳಿದಿದೆ. ತಮಗೆ ಸಿಗಬೇಕಾದ ಸೌಕರ್ಯವನ್ನಾದರೂ ದೊರಕಿಸಿಕೊಡಿ ಎಂದು ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊದಿನಪುರ ಹಣಬರಮಕ್ಕಿ ಕಾಲೋನಿಯ ಜನರು ಜನಪ್ರತಿನಿಧಿಗಳಲ್ಲಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೂ ಈವರೆಗೂ ಅವರ ನೋವಿಗೆ ನೆರವಾದವರು ಮಾತ್ರ ಯಾರೂ ಇಲ್ಲ.
ಹಕ್ಕಪತ್ರವಿಲ್ಲ, ಸರಕಾರಿ ಸವಲತ್ತೂ ದೊರೆಯೊಲ್ಲ
ಹಣಬರಮಕ್ಕಿ ಕಾಲೋನಿಯ ಜನ ಸುಮಾರು 12-13 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದರೂ ಈವರೆಗೂ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ದೊರೆತಿಲ್ಲ. ಹಕ್ಕುಪತ್ರವಿಲ್ಲದೇ ಇಲ್ಲಿನ ನಿವಾಸಿಗಳಿಗೆ ಯಾವ ಸರಕಾರಿ ಸೌಲಭ್ಯಗಳೂ ದೊರಕುತ್ತಿಲ್ಲ. ರೆಷನ್ ಕಾರ್ಡು, ವೋಟರ್ ಐಡಿ ಯಾವುದೂ ಇಲ್ಲದೇ ಪಾಡು ಹೇಳತೀರದು.
ಕುಡಿಯುವ ನೀರಿನ ಸಮಸ್ಯೆ
ಕಾಲೋನಿಯಲ್ಲಿ ಕುಡಿಯವ ನೀರಿನದ್ದೇ ದೊಡ್ಡ ಸಮಸ್ಯೆ. ಮಳೆಗಾಲದಲ್ಲಾದರೂ ದೂರದ ಸರಕಾರಿ ಬಾವಿಯನ್ನು ಇಲ್ಲಿನ ಜನ ಅವಲಂಬಿಸಿದ್ದಾರೆ. ಬೇಸಿಗೆ ಬಂತೆಂದರೆ ಆ ಬಾವಿಯಲ್ಲಿಯೂ ನೀರಿನ ಕೊರತೆ ಕಾಣಿಸಿಕೊಳ್ಳುತ್ತದೆ. ಇನ್ನು ದಿನನಿತ್ಯದ ಉಪಯೋಗಕ್ಕಾಗಿ ತೋಡಿನಲ್ಲಿ ಹರಿದು ಬರುವ ನೀರನ್ನೇ ಜನ ಅವಲಂಬಿಸಿಕೊಂಡಿದ್ದಾರೆ.
ರಸ್ತೆಯೆಲ್ಲ ಹಳ್ಳವಾಗಿದೆ.
ಹಣಬರಮಕ್ಕಿ ಕಾಲೋನಿಗೆ ಬರಬೇಕೆಂದರೆ ಹರಸಾಹಸ ಪಡಬೇಕು. ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವ ಮಣ್ಣಿನ ರಸ್ತೆಯ ಮೇಲೆಯೇ ನೀರು ಹರಿಯುತ್ತಿರುತ್ತೆ. ಶಾಲೆಗೆ ತೆರಳುವ ಮಕ್ಕಳು, ಅಶಕ್ತರಿಗೆ ಈ ಮಾರ್ಗದಲ್ಲಿ ತೆರಳುವುದು ಕೂಡ ಕಷ್ಟವೇ. ಮಳೆಗಾಲದ ಆರಂಭದಿಂದಲೂ ಈ ಸ್ಥಿತಿ ಮುಂದವರಿದಿದ್ದರೂ ಸ್ಥಳೀಯಾಡಳಿತ ಮಾತ್ರ ಕಣ್ಣಮುಚ್ಚಿ ಕುಳಿತಿದೆ.
ಕರೆಂಟಿನದ್ದೂ ಸಮಸ್ಯೆ
ಕಾಲೋನಿಯ ಎಲ್ಲಾ ಮನೆಗಳಿಗೆ ಈವರೆಗೆ ಕರೆಂಟು ದೊರೆತಿಲ್ಲ. ಇಲ್ಲಿನ ನಿವಾಸಿಗಳು ಸಾಕಷ್ಟು ಭಾಗಿ ಜನಪ್ರತಿನಿಧಿಗಳ ಸಂಪರ್ಕಿಸಿ ಕರೆಂಟು ಹಾಕಿಸಿಕೊಳ್ಳಲು ಸೋತಿದ್ದಾರೆ. ಗ್ರಾಮಸಭೆಯಲ್ಲಿ ಎಲ್ಲರಿಗೂ ಕರೆಂಟು ನೀಡುವ ಭರವಸೆ ನೀಡದ ಮೇಲೂ ಪಂಚಾಯತಿಗೆ ಅರ್ಜಿ ಸಲ್ಲಿಸಲು ಹೋದರೆ ನೂರೊಂದು ಕಾರಣ ನೀಡಿ ಅರ್ಜಿ ತಿರಸ್ಕರಿಸುತ್ತಿದ್ದಾರೆ ಇಲ್ಲಿನ ನಿವಾಸಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಶಿರೂರು ಗ್ರಾಮ ಪಂಚಾಯತ್ ಇನ್ನಾದರೂ ಎಚ್ಚೆತ್ತುಕೊಂಡು ಕಾಲೋನಿಯ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮನಸ್ಸು ಮಾಡಬೇಕಿದೆ. ಜನಪ್ರತಿನಿಧಿಗಳು ಭರವಸೆಯನ್ನು ನೀಡುವುದರ ಹೊರತಾಗಿಯೂ ನೈಜ ಕಾಳಜಿಯನ್ನು ತೋರಿ ದಶಕಗಳ ಸ್ವಯತ್ತತೆಯ ಕೂಗಿಗೆ ಧ್ವನಿಯಾಗಬೇಕಿದೆ.
ಚಿತ್ರ ವರದಿ: ಸುನಿಲ್ ಹೆಚ್. ಜಿ. ಬೈಂದೂರು