ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠ, ಎಡತೊರೆ ಮೈಸೂರು ಇದರ ಪೀಠಾಧಿಪತಿಗಳಾದ ಶ್ರೀ ಶಂಕರ ಭಾರತೀ ಸ್ವಾಮೀಜಿ ಅವರು ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಭೇಟಿಯನ್ನಿಟ್ಟು ಆಶೀರ್ವದಿಸಿದರು.
ಶಾಲೆಯ ಎಲ್ಲಾ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು, ವಿದ್ಯಾರ್ಥಿಗಳು ಪ್ರತಿನಿತ್ಯ ಭಜನೆಯನ್ನು ನಡೆಸುತ್ತಿರುವುದನ್ನು ತಿಳಿದು ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಗುರ್ವಷ್ಟಕವೇ ಮೊದಲಾದ ಶಂಕರಾಚಾರ್ಯರ ಕೃತಿಗಳನ್ನೂ, ಭಜನೆಗಳನ್ನೂ ಹಾಡಿ ಗುರುಗಳನ್ನು ನಮಿಸಿದರು.
ಹತ್ತು ವರ್ಷಗಳ ಹಿಂದೆ ತಾವು ಈ ಶಾಲೆಗೆ ಭೇಟಿ ನೀಡಿರುವುದನ್ನು ಸ್ಮರಿಸಿಕೊಂಡು, ನಂತರ ಇಲ್ಲಾದ ಬದಲಾವಣೆಗಳನ್ನು ಕೇಳಿ ತಿಳಿದುಕೊಂಡು ಆಶೀರ್ವದಿಸುತ್ತಾ ವಿದ್ಯಾರ್ಥಿ ಜೀವನದಿಂದಲೇ ಶಿಸ್ತನ್ನು ಅಳವಡಿಸಿಕೊಂಡು, ಯೋಗಾಭ್ಯಾಸವನ್ನು ನಿತ್ಯಭಜನೆಯನ್ನೂ ನಡೆಸುವುದು ವಿದ್ಯಾರ್ಥಿಗಳ ಜ್ಞಾಪಕಶಕ್ತಿಯನ್ನು ವೃದ್ಧಿಸುವಂತೆ ಮಾಡುವುದು.
ದೇವರು ಎಲ್ಲಾ ಕಡೆಯಲ್ಲೂ ಇದ್ದು ನಮ್ಮನ್ನು ಹರಸುತ್ತಿರುತ್ತಾರೆ. ಯಾರೂ ಇಲ್ಲದ ಸ್ಥಳದಲ್ಲಿ ಬಾಳೆಹಣ್ಣು ತಿನ್ನಲು ಗುರುಗಳ ಅಪ್ಪಣೆಯಂತೆ ಹುಡುಕ ಹೊರಟ ಕನಕದಾಸರಿಗೆ ದೇವನು ಎಲ್ಲಾ ಕಡೆಯಲ್ಲೂ ಇರುವನೆಂದು ತಿಳಿಯಿತು. ಅದರಂತೆ ವಿದ್ಯಾರ್ಥಿಗಳು ಭಗವಂತನ ಆರಾಧನೆಯಲ್ಲಿ ಸದಾ ತೊಡಗಿದರೆ ಭಗವಂತ ಸದಾ ಮಿತ್ರನಂತೆ ಇರುವನು. ಸದಾ ಭಗವದ್ಭಕ್ತಿಯಿಂದ ಕೂಡಿ ಉತ್ತಮವಾಗಿ ವಿದ್ಯಾಭ್ಯಾಸ ನಡೆಸಿರಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕರ ಧರ್ಮಪತ್ನಿಯವರಾದ ರಮಾದೇವಿ ಆರ್. ಭಟ್ ಫಲಸಮರ್ಪಣೆಗೈದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದಮೂರ್ತಿ ಬಾಲಚಂದ್ರ ಭಟ್, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್. ಉಪಸ್ಥಿತರಿದ್ದರು.
ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಕಾರ್ಯಕ್ರಮವನ್ನು ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು.
ಶಾಲಾ ಶಿಕ್ಷಕ ಶಿಕ್ಷಕೇತರವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಗುರುಗಳಿಂದ ಆಶೀರ್ವಾದ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.















