ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿಯಲ್ಲಿ ಗುರುವಾರ ತಾಯಿಯನ್ನು ಕೊಂದು ಸುಟ್ಟು ಹಾಕಿದ ಪ್ರಕರಣದ ಆರೋಪಿ ಮಗ ಮೆಲ್ವಿನ್ ಮೊಂತೇರೊ(38)ನನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.
ಆರೋಪಿ ತನ್ನ ತಾಯಿಯನ್ನು ಕೊಲೆ ಮಾಡಿದ ಬಳಿಕ ಆಟೋ ರಿಕ್ಷಾದಲ್ಲಿ ಪರಾರಿಯಾಗಿದ್ದನು. ಈ ಕುರಿತ ಮಾಹಿತಿ ಪೊಲೀಸರಿಗೆ ದೊರೆತಿದ್ದು ನಂತರ ಆತ ಬಸ್ ಮೂಲಕ ಉಡುಪಿ-ಕುಂದಾಪುರ ಮಾರ್ಗವಾಗಿ ಕೊಲ್ಲೂರಿನತ್ತ ಸಾಗುತ್ತಿರುವುದು ತಾಂತ್ರಿಕ ಮಾಹಿತಿಗಳಿಂದ ಲಭಿಸಿತ್ತು. ಅಂತೆಯೇ ಕಾಸರ ಗೋಡು ಪೊಲೀಸರು ಉಡುಪಿ ಎಸ್ಪಿ ಹರಿರಾಂ ಶಂಕರ್ ಅವರಿಗೆ ಮಾಹಿತಿ ನೀಡಿದ್ದರು.
ಮಂಜೇಶ್ವರ ಪೊಲೀಸರ ಒಂದು ತಂಡ – ಮೋಪಿಯನ್ನು ಬೆನ್ನತ್ತಿ ಬಂದಿತ್ತು. ಕುಂದಾಪುರಕ್ಕೆ ಬಂದಿಳಿದಿದ್ದ ಆರೋಪಿ ಅಲ್ಲಿಂದ ಕೊಲ್ಲೂರಿಗೆ ತೆರಳುವ ಖಾಸಗಿ ಬಸ್ ಏರಿದ್ದನು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು. ಆ ಹಿನ್ನೆಲೆಯಲ್ಲಿ ಕೊಲ್ಲೂರು ಪೊಲೀಸರು ಅಲರ್ಟ್ ಆಗಿದ್ದರು. ಆತ ದಾರಿ ಮಧ್ಯೆ ಇಳಿದು ಬೈಂದೂರಿನತ್ತ ಸಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೈಂದೂರು ಪೊಲೀಸರು ಕೂಡ ಸನ್ನದ್ಧರಾಗಿದ್ದರು. ಈ ಮಧ್ಯೆ ಕಾಸರಗೋಡು ಪೊಲೀಸ್ ತಂಡ ಬೈಂದೂರಿನತ್ತ ಆಗಮಿಸಿತ್ತು.
ಕೊಲ್ಲೂರಿಗೆ ಬಸ್ ಟಿಕೆಟ್ ಮಾಡಿದ್ದ ಆರೋಪಿ ಕೊಲ್ಲೂರಿನಿಂದ ಅನತಿ ದೂರದಲ್ಲಿರುವ ಹಾಲ್ಕಲ್ ಎಂಬಲ್ಲಿ ಇಳಿದಿದ್ದನು. ಮಾಹಿತಿ ದೊರೆತ ಪೊಲೀಸರು ಸ್ಥಳೀಯರನ್ನು ವಿಚಾರಿಸಿದ್ದು ಆತ ಕೊಲ್ಲೂರು-ಬೈಂದೂರು ರಸ್ತೆ ಮೂಲಕ ಬೈಂದೂರು ಕಡೆ ತೆರಳಿರುವುದಾಗಿ ಮಾಹಿತಿ ನೀಡಿದರು. ಕೊಲ್ಲೂರಿ ನಿಂದ ಪೊಲೀಸರ ತಂಡ, ಬೈಂದೂರಿನ ತಂಡ ಹಾಗೂ ಕಾಸರಗೋಡು ಪೊಲೀಸರು ಆರೋಪಿಯನ್ನು ಒಂದಷ್ಟು ಮಾಹಿತಿಗಳ ಆಧಾರದಲ್ಲಿ ಬೈಂದೂರಿನ ಕಾಲ್ತೋಡು ಸಮೀಪದ ಬ್ಯಾಟ್ಕಣಿ ಸಮೀಪದಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಯಿತು.
ಆತನನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಆರೋಪಿ ಮೆಲ್ವಿನ್ ಕೆಲವು ಸಮಯಗಳ ಹಿಂದೆ ಈ ಭಾಗದಲ್ಲಿ ಕೂಲಿ ಕಾರ್ಮಿಕನಾಗಿ ದುಡಿದಿದ್ದರಿಂದ ಈ ಪರಿಸರದ ಪರಿಚಯ ಆತನಿಗಿತ್ತು. ಹೀಗಾಗಿ ಇಲ್ಲಿ ಬಂದು ಬಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದನು ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆಯಲ್ಲಿ ಬೈಂದೂರು ಎಸ್ಟ್ ತಿಮ್ಮೇಶ್ ಬಿ.ಎನ್., ಕೊಲ್ಲೂರು ಎಸ್ಸೆ ವಿನಯ್ ಎಂ. ಕೊರ್ಲಹಳ್ಳಿ, ಸಿಬ್ಬಂದಿಗಳಾದ ನಾಗೇಂದ್ರ, ರಾಮ ಪೂಜಾರಿ, ವಿಜಯ್, ಬೈಂದೂರು ಠಾಣೆ ಸಿಬ್ಬಂದಿಗಳಾದ ಪರಯ್ಯ ಮಠಪತಿ, ಮಾಳಪ್ಪ ದೇಸಾಯಿ, ಚಿದಾನಂದ, ಹೇಮರಾಜ್ ಪಾಲ್ಗೊಂಡಿದ್ದರು.















