ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ಅರ್ಜಿ ನಮೂನೆ 94 ಸಿ ಮತ್ತು 94 ಸಿ ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಸಾವಿರಾರು ಅರ್ಜಿಗಳು ತಿರಸ್ಕಾರವಾಗಲು ಶಾಸಕರ ವೈಫಲ್ಯ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.
ಕುಂದಾಪುರದ ಶಾಸಕರು ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ನಮೂನೆ 94 ಸಿ ಮತ್ತು 94 ಸಿ ಸಿ ಅಡಿ ಕೆಲವೊಂದು ಅರ್ಜಿದಾರರಿಗೆ ಹಕ್ಕುಪತ್ರ ನೀಡಿ ಅದನ್ನೇ ದೊಡ್ಡ ಸಾಧನೆ ಎಂದು ಪ್ರಚಾರ ನೀಡುತ್ತಿದ್ದು, ಅಧಿಕೃತ ಮಾಹಿತಿಯಂತೆ ಕುಂದಾಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಂದಾಪುರ ತಾಲ್ಲೂಕಿನಲ್ಲಿ 7128 ಅರ್ಜಿ, ಬ್ರಹ್ಮಾವರ ತಾಲ್ಲೂಕಿನಲ್ಲಿ 4365 ಅರ್ಜಿ ಹಾಗೂ ಹೆಬ್ರಿ ತಾಲ್ಲೂಕಿನಲ್ಲಿ 2257 ಅರ್ಜಿ ತಿರಸ್ಕಾರಗೊಂಡಿವೆ. ಈ ತಿರಸ್ಕಾರ ಅಧಿಕಾರಿಗಳ ಬೇಜವಾಬ್ದಾರಿ ತನ ಹಾಗೂ ಭೂ ರಹಿತರ ಬಗೆಗಿನ ತಾತ್ಸಾರ ಹಾಗೂ ಲಂಚದ ಬೇಡಿಕೆಗೆ ಆರ್ಥಿಕವಾಗಿ ಸಮರ್ಥನಲ್ಲದ ಅರ್ಜಿದಾರ ಸ್ಪಂದಿಸದ ಕಾರಣ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ.
ಅರ್ಜಿದಾರರ ಪರವಾಗಿ ನಿಂತು ಅಧಿಕಾರಿಗಳಿಂದ ಅರ್ಜಿದಾರರಿಗೆ ಹಕ್ಕುಪತ್ರ ಕೊಡಿಸಬೇಕಾದ ಶಾಸಕರು ಅಧಿಕಾರಿಗಳು ನೀಡಿದ ಕಾರಣವನ್ನು ಕೇಳಿಕೊಂಡು ಕಣ್ಣುಮುಚ್ಚಿ ಕುಳಿತಿರುವುದು ಶಾಸಕರು ಭೂ ರಹಿತರ ಪರವಾಗಿಲ್ಲ ಎನ್ನುವುದನ್ನು ಏತ್ತಿ ತೋರಿಸುತ್ತದೆ.
ಶಾಸಕರು ಮುಂದಾದರೂ ಅಧಿಕಾರಿಗಳ ಮಾತಿಗೆ ಮಾತ್ರ ಮನ್ನಣೆ ನೀಡದೆ ಜನಸಾಮಾನ್ಯರ ಪರವಾಗಿ ಕರ್ತವ್ಯ ನಿರ್ವಹಿಸಲಿ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗೃಹಿಸಿದ್ದಾರೆ.










