ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಮಾಜಿಕ ಜಾಲತಾಣದ ಜನಪ್ರಿಯ ಪೋರ್ಟಲ್ ಗಳಲ್ಲೆಲ್ಲ ಬಳಕೆದಾರ ಸ್ನೇಹಿ ತಂತ್ರಾಂಶ ಭಾಷೆ ಪೈತಾನ್ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಗಳನ್ನೇ ಹೆಚ್ಚಾಗಿ ಬಳಸುತ್ತಾರೆ ಎಂದು ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಡೀನ್ ಎಕಾಡೆಮಿಕ್ಸ್ ಸಹಾಯಕ ಪ್ರಾಧ್ಯಾಪಕರಾದ ಗಿರಿರಾಜ್ ಭಟ್ ಅವರು ಹೇಳಿದರು.
ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಕಂಪ್ಯೂಟರ್ ವಿಭಾಗ ಆಯೋಜಿಸಿದ ‘ಪೈತಾನ್ ಓರಿಯಂಟೇಶನ್ ‘ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಕಂಪ್ಯೂಟರ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಾಗುತ್ತಿರುವ ಕಲ್ಪನಾತೀತ ಬೆಳವಣಿಗೆ ಆವಿಷ್ಕಾರಗಳು ತಕ್ಷಣದಲ್ಲಿ ಉದ್ಯೋಗಾವಕಾಶಕ್ಕೆ ಧಕ್ಕೆ ಎನಿಸಿದರೂ, ಕಾಲಾಂತರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದೂ ಖಚಿತ. ಪ್ರತಿಭೆ ಮತ್ತು ಶ್ರಮದಿಂದ ಕೆಲಸ ಮಾಡಿದರೆ ಬೇರೆ ಕ್ಷೇತ್ರಗಳಿಗಿಂತ ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಉನ್ನತ ಸ್ಥಾನ ತಲುಪಬಹುದು ಎಂದರು.
ಕುಂದಾಪುರದ ಎಮ್‌ಐಸಿಇ ಕಂಪ್ಯೂಟರ್ ಸಂಸ್ಥೆಯ ಪ್ರಾಂಶುಪಾಲರಾದ ವಾಲ್ಟರ್ ಫೆರ್ನಾಂಡೀಸ್ ಅವರು ಕಂಪ್ಯೂಟರ್ ತರಬೇತಿ ನೀಡುವ ತಮ್ಮ ಸುದೀರ್ಘ ಅನುಭವದಲ್ಲಿ ಕಂಪ್ಯೂಟರ್ ಕ್ಷೇತ್ರ ಹಂತ ಹಂತವಾಗಿ ಸಾಧಿಸಿದ ಅಗಾಧ ಪ್ರಗತಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ಕಂಪ್ಯೂಟರ್ ವಿಭಾಗದ ಉಪನ್ಯಾಸಕರಾದ ಪ್ರಣವ್ ಆರ್ ತಾವು ಅಭಿವೃದ್ಧಿ ಪಡಿಸಿದ ಕೆಲವು ತಂತ್ರಾಂಶ ಭಾಷೆಯ ಬಗ್ಗೆ ಸ್ಲೈಡ್ಸ್ ಮೂಲಕ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಕಂಪ್ಯೂಟರ್ ವಿಷಯವನ್ನು ಉತ್ತಮ ಧ್ಯೇಯದೊಂದಿಗೆ ಕಲಿಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಕಂಪ್ಯೂಟರ್ ವಿಭಾಗದ ಉಪನ್ಯಾಸಕ ಅಭಿಜಿತ್ ಅವರು ನಿರೂಪಿಸಿ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಸಂದೀಪ್ ಪೂಜಾರಿ ಅವರು ಅತಿಥಿಗಳನ್ನು ಸ್ವಾಗತಿಸಿ, ಕಂಪ್ಯೂಟರ್ ವಿಭಾಗದ ಉಪನ್ಯಾಸಕರಾದ ಸೂರ್ಯ ಅವರು ಧನ್ಯವಾದ ಸಲ್ಲಿಸಿದರು.















