ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ನಾಡ ಗ್ರಾಮ ಪಂಚಾಯತ್ ಸಮೀಪ ರಸ್ತೆಯ ಬದಿಯಲ್ಲಿ ಮಲಗಿದ್ದ ಗೋವುಗಳನ್ನು ಕಾರಿನಲ್ಲಿ ಸಾಗಿಸಲು ಯತ್ನಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಚಾಲಕ ದಿಪೇಶ್ ಖಾರ್ವಿ ಹಾಗೂ ಅವರ ಸ್ನೇಹಿತ ಅಭಿಜಿತ್ ಪಿಕಪ್ ವಾಹನದಲ್ಲಿ ಫಾರ್ಮ್‌ಗಳಿಗೆ ಕೋಳಿಗಳನ್ನು ಅನ್‌ಲೋಡ್ ಮಾಡಲು ತೆರಳುತ್ತಿದ್ದ ಸಂದರ್ಭ ಬೆಳಿಗ್ಗೆ 04-00 ಗಂಟೆಯ ಸುಮಾರಿಗೆ ನಾಡ ಗ್ರಾಮ ಪಂಚಾಯತ್ ಸಮೀಪ ತೆರಳುತ್ತಿದ್ದಾಗ ಒಂದು ಬಿಳಿ ಬಣ್ಣದ ಕಾರಿನಲ್ಲಿ ಮೂರು ಜನರು ಬಂದು ನಾಡ ಶಾನ್ ಮೆಡಿಕಲ್ ಪಕ್ಕದಲ್ಲಿ ಮಲಗಿರುವ ದನಗಳನ್ನು ಕಾರಿಗೆ ತುಂಬಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಆ ಸಮಯದಲ್ಲಿ ಬಂದ ಪಿಕಪ್ ವಾಹನವನ್ನು ನೋಡಿ ದನವನ್ನು ತುಂಬಿಸಲು ಪ್ರಯತ್ನಿಸಿದವರು ಓಡಿ ಹೋಗಿದ್ದರು. ಈ ಬಗ್ಗೆ ದಿಪೇಶ್ ಅವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಿಂದ ವಿಶೇಷ ತಂಡ ರಚಿಸಿ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಾದ ಬ್ರಹ್ಮಾವರ ಹೊನ್ನಾಳಿಯ ನೌಫಲ (23) ಗುಲ್ವಾಡಿ ಮಾವಿನಕಟ್ಟೆಯ ನಿಶಾದ್ (23) ಎಂಬಾತನನ್ನು ವಶಕ್ಕೆ ಮಂಗಳವಾರ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೋರ್ವ ಆರೋಪಿ ಮೊಹಮ್ಮದ್ ಅದ್ನಾನ್ ಪತ್ತೆಗೆ ಬಲೆ ಬೀಸಲಾಗಿದೆ.
ಕೃತ್ಯಕ್ಕೆ ಬಳಸಿದ ಅಂದಾಜು 5 ಲಕ್ಷ ರೂಪಾಯಿ ಮೌಲ್ಯದ ಬಿಳಿ ಬಣ್ಣದ ಸ್ವೀಪ್ಟ್ ಕಾರು ಹಾಗೂ ಅಂದಾಜು ಮೌಲ್ಯ 9 ಸಾವಿರ ರೂ. ಮೌಲ್ಯದ 2 ಮೊಬೈಲ್ ಪೋನ್ ಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯ್ಕ, ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಂತೆ ಕುಂದಾಪುರ ಪೋಲೀಸ್ ಉಪಾಧೀಕ್ಷಕರು ಹೆಚ್ ಡಿ ಕುಲಕರ್ಣಿ, ಹಾಗೂ ಬೈಂದೂರು ವೃತ್ತನಿರೀಕ್ಷಕರಾದ ಸವಿತೃತೇಜ್ ಪಿ ಡಿ ಅವರ ನಿರ್ದೇಶನದಂತೆ ಗಂಗೊಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ರವರಾದ ಪವನ್ ನಾಯಕ್ (ಕಾ & ಸು), ಶ್ರೀ ಬಸವರಾಜ ಕನಶೆಟ್ಟಿ (ತನಿಖೆ), ಹಾಗೂ ಸಿಬ್ಬಂದಿಗಳಾದ, ಕೃಷ್ಣ ದೇವಾಡಿಗ, ಚೇತನ್, ಶಾಂತರಾಮ ಶೆಟ್ಟಿ ಹಾಗೂ ಸಂದೀಪ ಕುರಣಿ, ಪ್ರಸನ್ನ, ರಾಘವೇಂದ್ರ ಪೂಜಾರಿ ಕಾರ್ಯಾಚರಣೆಯಲ್ಲಿ ಭಾಗಹಿಸಿರುತ್ತಾರೆ. ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ತಂಡಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ – ಐಪಿಎಸ್ ಅವರು ಅಭಿನಂದಿಸಿದ್ದಾರೆ.















