ಕುಂದಾಪುರ: ಲಾಭವನ್ನು ಯೋಚಿಸಿ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ದಿನಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಬಗೆಗೆ ಚಿಂತಿಸದೇ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯದ ಕನಸು ಕಂಡಿದ್ದ ಶಾಲೆಯ ಪ್ರವರ್ತಕರನ್ನು ಎಂದಿಗೂ ಸ್ಮರಿಸಲೇಬೇಕು. ತಾನು ಗಳಿಸಿದ್ದು ಮಣ್ಣಿನಲ್ಲಿಯೇ ತನ್ನ ಸೇವೆಯೂ ಇರಬೇಕೆಂಬ ಕೃತಾಜ್ಞತೆ ಭಾವ ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯತ್ತದೆ ಎಂದು ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.
ಅವರು ಹಕ್ಲಾಡಿ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸುವರ್ಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಶಿಕ್ಷಣದಿಂದ ಮಾತ್ರ ಜಗತ್ತಿನಲ್ಲಿ ಬದಲಾವಣೆ ತರಲು ಸಾಧ್ಯ. ಉತ್ತಮ ಶಿಕ್ಷಣ ನೀಡಿದರೇ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ. ಹುಟ್ಟು ಸಾವುಗಳ ನಡುವಿನ ಜೀವನ ಅರ್ಥಪೂರ್ಣವಾಗಬೇಕಾದರೇ ಉತ್ತಮ ಸಮಾಜಕ್ಕೆ ನಮ್ಮ ಕೊಡುಗೆ ನೀಡಬೇಕಾಗುತ್ತದೆ ಎಂದವರು ಹೇಳಿದರು.
ಸುವರ್ಣ ಮಹೋತ್ಸವ ಸಮಿತಿ ಕಾರ್ಯಧ್ಯಕ್ಷ ಸಂತೋಷಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮ್ಯಾಪ್ಸ್ ಕಾಲೇಜಿನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ, ಶ್ರೀ ಕ್ಷೇತ್ರ ಮಾಣಿಕೊಳಲು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಜಗದೀಶಯ್ಯ ಹಲ್ಸನಾಡು, ಶ್ರೀ ಕ್ಷೇತ್ರ ಸೌಕೂರು ಮಾಜಿ ಧರ್ಮದರ್ಶಿ ಅಶೋಕ್ ಕುಮಾರ್ ಶೆಟ್ಟಿ ಕಾವ್ರಾಡಿ, ವಕೀಲ ಟಿ.ಬಿ. ಶೆಟ್ಟಿ, ಧ.ಗ್ರಾ.ಯೋ. ಕುಂದಾಪುರ ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ, ನೂಜಾಡಿ ಸಂತೋಷಕುಮಾರ್ ಶೆಟ್ಟಿ, ಉಪ್ರಳ್ಳಿ ಶ್ರೀ ಕಾಳಿಕಾಂಬ ದೇವಳದ ಅಧ್ಯಕ್ಷ ಬಡಾಕೆರೆ ಮಂಜುನಾಥ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲೆಯಲ್ಲಿ ಕಳೆದ 50ವರ್ಷಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳನ್ನು ಗೌರವಿಸಲಾಯಿತು. ಶಾಲೆ ಮುಖ್ಯೋಪಧ್ಯಾಯ ಡಾ. ಕಿಶೋರ್ ಕುಮಾರ್ ಶೆಟ್ಟಿ, ಹೊಸಂಗಡಿ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಗಣೇಶ್ ಹೆಬ್ಬಾರ್ ಸ್ವಸ್ತಿವಾಚನಗೈದರು. ಕೆ.ಸಿ. ರಾಜೇಶ್ ಹಾಗೂ ರಂಜಿತಕುಮಾರ್ ಶೆಟ್ಟಿ ವಕ್ವಾಡಿ ನಿರೂಪಿಸಿದರು.