ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮೀನುಗಾರಿಕೆ ಇಲಾಖೆ ಮಂಡ್ಯ ಜಿಲ್ಲೆ ಮತ್ತು ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಉಡುಪಿ ಜಿಲ್ಲೆ ಜಂಟಿಯಾಗಿ ಆಯೋಜಿಸಿದ ಮುತ್ತು ಕೃಷಿ ಪ್ರಾಯೋಗಿಕ ಮಾಹಿತಿ ಕಾರ್ಯಾಗಾರ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡಜಟಕ ಗ್ರಾಮದಲ್ಲಿ ನಡೆಯಿತು.
ಉಡುಪಿ ಕಿನಾರ ಎಫ್‌ಪಿಓ ಮಂಡ್ಯ ಜಿಲ್ಲೆಯಲ್ಲಿನ ಮುತ್ತು ಕೃಷಿ ಆಸಕ್ತ ರೈತರನ್ನು ಗುರುತಿಸಿ ಇವರುಗಳ ಮೂಲಕ 20 ಸಾವಿರ ಕಪ್ಪೆಚಿಪ್ಪಿಗೆ ನ್ಯೂಕ್ಲೆಸ್ ಅಳವಡಿಸಿ ಅವರ ಕೃಷಿ ಹೊಂಡದಲ್ಲಿ ಮುತ್ತು ಕೃಷಿ ಪ್ರಾರಂಭಿಸಲು ಉತ್ತೇಜನ ನೀಡಲಾಯಿತು.
ಮಂಡ್ಯ ಜಿಲ್ಲೆಯ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಬಾಬಾಸಾಬ್..ಎಚ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಮಿಲನ ಭರತ್ ಅವರು ತಮ್ಮ ತಾಲೂಕಿನ 35 ಆಸಕ್ತ ಮುತ್ತು ಕೃಷಿ ರೈತರನ್ನು ಅಧ್ಯಯನ ಪ್ರವಾಸದ ಮೂಲಕ ಈ ಮಾಹಿತಿ ಕಾರ್ಯಾಗಾರದಲ್ಲಿ ರೈತರು ಭಾಗವಹಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಾದ್ಯಂತ ಮನೆ ಮನೆಯಲ್ಲಿ ಮುತ್ತು ಕೃಷಿ ಆರಂಭಿಸಲು ತಮ್ಮ ರೈತರಿಗೆ ಕರೆ ನೀಡಿದರಲ್ಲದೆ ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಕಾರ್ಯವನ್ನು ಶ್ಲಾಘಿಸಿದರು.
ಉಡುಪಿ ಕಿನಾರ ಎಫ್‌ಪಿಓ ನಿರ್ದೇಶಕ ಸುದಿನ ಮುತ್ತು ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಾದ್ಯಂತ 30 ಕ್ಕೂ ಹೆಚ್ಚು ಆಸಕ್ತ ಮುತ್ತು ಕೃಷಿಕರನ್ನು ಗುರುತಿಸಿ ಮುತ್ತು ಕೃಷಿಯನ್ನು ಮಾದರಿ ಕೃಷಿಯನ್ನಾಗಿ ಮಾಡಲು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಾಗಮಂಗಲ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕ ಮಹಾದೇವ್ ಸ್ವಾಮಿ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡಜಟಕ ಗ್ರಾಮದ ಮುತ್ತು ಕೃಷಿಕರಾದ ಅಜಯ್, ವಿನಯ್ ಮತ್ತು ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಮೀನುಗಾರ ರೈತರು ಉಪಸ್ಥಿತರಿದ್ದರು.















