ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಿಂದ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಿಗೆ ಸಿ.ಎಮ್.ಎ. (Cost and Management Accounting) ಕೋರ್ಸ್‌ನ ಮಹತ್ವದ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಬೆಂಗಳೂರು ಜಿ.ಸಿ, ರಾವ್ ಅಕಾಡೆಮಿ ಇದರ ಮುಖ್ಯಸ್ಥರಾದ ಸಿ.ಎ, ಸಿ.ಎಮ್‌ಎ, ಜಿ.ಸಿ. ರಾವ್ ಅವರು ಮಾತನಾಡಿ, ಉದ್ಯೋಗಕ್ಕಾಗಿ ಪೈಪೋಟಿ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಕೇವಲ ಸರಕಾರಿ ಉದ್ಯೋಗಕ್ಕಾಗಿ ಕಾಯದೇ ವೃತ್ತಿಪರ ಕೋರ್ಸ್ ಆದ ಕೋಸ್ಟ್ ಎಂಡ್ ಮ್ಯಾನೇಜ್‌ಮೆಂಟ್ ಅಕೌಂಟಿಂಗ್ ನತ್ತ ಗಮನ ಹರಿಸಿದರೆ ಉತ್ತಮ ಸಂಪಾದನೆ ಜೊತೆಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವನ್ನು ಗಳಿಸಬಹುದು ಎಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನಾಡಿದರು.
ಇನ್ನೋರ್ವ ಅತಿಥಿ ಬೆಂಗಳೂರು ಜಿ.ಸಿ. ರಾವ್ ಅಕಾಡೆಮಿ ಅಧ್ಯಾಪಕ ನರೇಶ್ ಅವರು ಮಾತನಾಡಿ, ಕಠಿಣ ಪರಿಶ್ರಮದಿಂದ ಸಿಎಮ್‌ಎ ಕೋರ್ಸ್‌ನ್ನು ಸುಲಭವಾಗಿ ತೇರ್ಗಡೆಗೊಳ್ಳಬಹುದು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ವಹಿಸಿದರು. ಐಕ್ಯೂಎಸಿ ಸಂಚಾಲಕ ನಾಗರಾಜ ಯು., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ.,ವಿದ್ಯಾರ್ಥಿ ಪ್ರತಿನಿಧಿಗಳಾದ ಭೂಮಿಕಾ ಹಾಗೂ ಸುದೀಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ ಬಿ. ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.















