ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ ಬೆಳದಿಂಗಳ ಚಿಂತನ ಉಪನ್ಯಾಸ ಮಾಲಿಕೆಯಲ್ಲಿ “ಯಶಸ್ವಿ ಶಿಕ್ಷಕ” ಎಂಬ ವಿಷಯದ ಕುರಿತು ಬ್ರಹ್ಮಾವರ ಎಸ್.ಎಮ್.ಎಸ್. ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಸುಶೀಲಾ ರೈ ಉಪನ್ಯಾಸ ನೀಡಿದರು.
ಶಿಕ್ಷಕ ನಿರಂತರ ಓದುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ತಾವು ಕಲಿಸುವ ವಿಷಯದ ಬಗ್ಗೆ ಆಳವಾದ ಜ್ಞಾನ ಹೊಂದಿರಬೇಕು. ಉತ್ತಮ ಸಂವಹನ ಕೌಶಲ್ಯ ಹಾಗೂ ವಿದ್ಯಾರ್ಥಿಗಳ ಜೊತೆ ಉತ್ತಮ ಬಾಂಧವ್ಯದ ಮೂಲಕ ಯಶಸ್ವಿ ಶಿಕ್ಷಕರಾಗಲು ಸಾಧ್ಯ. ಯಶಸ್ವಿ ಶಿಕ್ಷಕ ಉತ್ತಮ ಸಮಾಜದ ನಿರ್ಮಾತೃ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಮ ಶ್ರೇಷ್ಠ ವೃತ್ತಿಯನ್ನು ನಿರ್ವಹಿಸುವನು ಶಿಕ್ಷಕ. ತನ್ನ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿದರೆ ಸಮಾಜದಲ್ಲಿ ಗೌರವ ಮನ್ನಣೆಗಳು ದೊರಕುತ್ತದೆ ಎಂದರು.
ಕಾರ್ಯಕ್ರಮ ಸಂಯೋಜಕ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಸ್ತಾಪಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಪ್ರವೀಣಾ ಎಮ್. ಪೂಜಾರಿ ಕಾರ್ಯಕ್ರಮ ನಿರೂಪಿಸಿ, ರಶ್ಮಿತಾ ಶೆಟ್ಟಿ ವಂದಿಸಿದರು.










