ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘವು 67 ವರ್ಷಗಳ ಸಾರ್ಥಕ ಸೇವೆಯನ್ನು ನೀಡಿ 68ನೇ ವರ್ಷದಲ್ಲಿ ಯಶಪ್ರದವಾಗಿ ಮುನ್ನಡೆಯುತ್ತಿದೆ. ಸಂಘದ ಎಲ್ಲಾ 13 ಶಾಖೆಗಳು ಪ್ರಗತಿ ಪಥದಲ್ಲಿ ಸಾಗುತ್ತಿವೆ. ವರದಿ ವರ್ಷದ ಅಂತ್ಯಕ್ಕೆ ಸಂಘವು ಒಟ್ಟು ರೂ. 268,23,83,236.70 ಠೇವಣಾತಿಯನ್ನು ಹೊಂದಿದ್ದು, ರೂ. 5,83,50,933.46 ನಿವ್ವಳ ಲಾಭ ಗಳಿಸಿದೆ. ಸತತ 16 ವರ್ಷಗಳಿಂದ ಸಂಘವು ‘ಎ’ ತರಗತಿಯಲ್ಲಿ ಆಡಿಟ್ ವರ್ಗೀಕರಣವಾಗುತ್ತಿದ್ದು, ಸದಸ್ಯರಿಗೆ ಶೇ.16% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷರಾದ ಡಾ.ಕೃಷ್ಣ ಕಾಂಚನ್ ಹೇಳಿದರು.
ಅವರು ಕೋಟದ ವಿವೇಕ ಪದವಿಪೂರ್ವ ಕಾಲೇಜು ಇದರ ಮಹಾತ್ಮಗಾಂಧಿ ಸಭಾಭವನದಲ್ಲಿ ನಡೆದ ಕೋಟ ಸಹಕಾರಿ ವ್ಯವಸಾಯಕ ಸಂಘ ನಿ., ಕೋಟ ಇದರ 68ನೇ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು ಒಟ್ಟು 19,464 ಸದಸ್ಯರನ್ನು ಹೊಂದಿದ್ದು, ರೂ.3,53,51,150 ಪಾಲು ಬಂಡವಾಳವನ್ನು ಹೊಂದಿದೆ. ರೂ.5.80,69,566 ಸಾಲ ಪಡೆದಿದ್ದು ಸದಸ್ಯರ ವಿವಿಧ ಉದ್ದೇಶಗಳಿಗೆ ವಿತರಿಸಲಾಗಿದೆ. ರೂ.3,92,246, ಸಹಾಯಧನಗಳು ಲಭಿಸಿವೆ. ಸಂಘವು ಒಟ್ಟು ರೂ.24,62,61,889.17 ನಿಧಿಗಳನ್ನು ಹೊಂದಿದೆ. ರೂ.3,91,50,144.55 ಸವಕಳಿ ನಿಧಿಗಳನ್ನು ಹೊಂದಿದೆ. ರೂ.1,26,04,353.71 ಅಮಾನತು ಸಾಲವಾಗಿದ್ದು, ರೂ.7,27,99,498 ಕಾದಿರಿಸಲಾಗಿದೆ ಎಂದರು.
ಶೇ.98.83 ಸಾಲ ವಸೂಲಾತಿಯಾಗಿದೆ. ರೂ.213,02,51,373.35 ಹೊರಬಾಕಿ ಸಾಲವಾಗಿರುತ್ತದೆ. ಸರಕಾರ ರೂಪಿಸಿದ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆಯನ್ನು ಕೂಡಾ ಸಂಘ ತನ್ನ ಸದಸ್ಯರಿಗೆ ವರದಿ ವರ್ಷದಲ್ಲೂ ವಿತರಿಸಿದ್ದು, ಪಹಣಿ ಪತ್ರದ ಎಕರೆಗನುಗುಣವಾಗಿ ರೂ.5 ಲಕ್ಷದ ವರೆಗೆ ಈ ಬಗೆಯ ಸಾಲ ಪಡೆದು ವಾಯಿದೆಗೆ ಸರಿಯಾಗಿ ಮರುಪಾವತಿಸಿದ್ದಲ್ಲಿ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಈ ಯೋಜನೆಯನ್ವಯ 868 ರೈತ ಸದಸ್ಯರಿಗೆ ರೂ.9,87,87,400 ರಷ್ಟರ ಮುಂಗಡ ನೀಡಲಾಗಿದೆ. ಶೇ.3ರ ಬಡ್ಡಿದರದಲ್ಲಿ ರೂ.15 ಲಕ್ಷದ ತನಕ ಸಾಲ ನೀಡುವುದನ್ನು ಮು೦ದುವರಿಸಲಾಗಿದೆ ಎಂದರು.
ವರದಿ ವರ್ಷದಲ್ಲಿ ಸಂಘದ ವ್ಯಾಪ್ತಿಯಲ್ಲಿ 1,175 ಸ್ವಸಹಾಯ ಗುಂಪುಗಳು ಇದ್ದು, ಗುಂಪುಗಳ ಮೂಲಕ ರೂ.9,64,48,563.33 ರಷ್ಟು ಠೇವಣಾತಿ ಸಂಗ್ರಹಿಸಲಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಸ್ವಸಹಾಯ ಗುಂಪುಗಳನ್ನು ಗುರುತಿಸಿ ನಿಬಡ್ಡಿಯಲ್ಲಿ ಸುತ್ತುನಿಧಿ ನೀಡಲಾಗಿದ್ದು, ಸ್ವ ಉದ್ಯೋಗ ಮಾಡಲು ರೂ.50,000ದ ವರೆಗೆ ಸುತ್ತುನಿಧಿ ನೀಡಲಾಗಿದೆ. ಸ್ವಸಹಾಯ ಗುಂಪುಗಳ ಸದಸ್ಯರ ಹಿತರಕ್ಷಣೆ ಬಗೆ ರೂಪಿಸಲಾದ ಸಮೃದ್ಧಿ ಕ್ಷೇಮ ನಿಧಿಯಿಂದ ವರದಿ ವರ್ಷದಲ್ಲಿ 7 ಮಂದಿ ಮೃತ ಸದಸ್ಯರ ಹೊರಬಾಕಿ ಇರುವ ಸಾಲಗಳ ಬಾಬು ಶೇ.25ರಂತೆ ರೂ.1,95,886 ಸಹಾಯಧನ ನೀಡಲಾಗಿದೆ. ಕೃಷಿ ಅಭಿವೃದ್ಧಿಯೇ ಮೂಲ ಉದ್ದೇಶ ಹೊಂದಿರುವ ಸಂಘವು ಕೃಷಿಯಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ವರದಿ ವರ್ಷದಲ್ಲಿ ಓರ್ವ ರೈತ ಸದಸ್ಯರ ಮಕ್ಕಳಿಗೆ ಕೃಷಿ ವಿಷಯದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸಂಘದ ಕೃಷಿ ಆವರ್ತನಾ ನಿದಿಯಿಂದ ರೂ. 10,000 ಧನ ಸಹಾಯ ನೀಡಲಾಗಿದೆ ಎಂದರು.
ಸಂಘವು ಮರಣ ನಿಧಿ ಯೋಜನೆಯಡಿ ವರದಿ ವರ್ಷದಲ್ಲಿ 145 ಮೃತ ಸದಸ್ಯರ ಉತ್ತರಾಧಿಕಾರಿಗಳಿಗೆ ರೂ.7,25,000 ನೆರವು ನೀಡಲಾಗಿದೆ.ಜಾನುವಾರು ಮೃತ್ಯುತ್ವ ನಿಧಿಯಿಂದ ಮೃತ ಪಟ್ಟ 15 ಜಾನುವಾರುಗಳ ಬಗ್ಗೆ ರೂ.3,02,316 ನೀಡಲಾಗಿದೆ. ಸದಸ್ಯರ ಕಲ್ಯಾಣ ನಿಧಿಯಿಂದ ವರದಿ ವರ್ಷದಲ್ಲಿ 32 ಮಂದಿ ಮೃತ ಸದಸ್ಯರಿಗೆ ಹೊರಬಾಕಿ ಇರುವ ಸಾಲಗಳ ಬಾಬು ಶೇ.25ರಂತೆ ರೂ.7,45,054 ಸಹಾಯಧನ ನೀಡಿ ಋಣಮುಕ್ತಗೊಳಿಸಲಾಗಿದೆ ಎ೦ದರು.
ಸಂಘವು 11 ಶಾಖೆಗಳ ನಿಯಂತ್ರಣದಲ್ಲಿ 12 ನ್ಯಾಯಬೆಲೆ ಅಂಗಡಿಗಳನ್ನು ಹೊಂದಿ ಬಯೋಮೆಟ್ರಿಕ್ ಮೂಲಕ ಪಡಿತರ ಸಾಮಾಗ್ರಿ ವಿತರಣೆ ಮಾಡುತ್ತಿದೆ. ಸಂಘದ ಪ್ರಧಾನ ಕಛೇರಿ ಮತ್ತು ಶಾಖೆಗಳಲ್ಲಿ ಸಕಲ ಮಾರಾಟ ಮಳಿಗೆ ಕಾರ್ಯನಿರ್ವಹಿಸುತ್ತಿದೆ. ಗುಂಡ್ಮಿ ಶಾಖೆಯಲ್ಲಿ ಪ್ರಧಾನಮಂತ್ರಿ ಜನೌಷಧ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದರು.
ಸ೦ಘವು ಸಾಧಿಸಿದ ಸರ್ವಾ೦ಗೀಣ ಸಾಧನೆಗೆ 71ನೇ ಅಖಿಲ ಭಾರತ ಸಹಕಾರ ಸಪ್ತಾಹ್ನದಲ್ಲಿ ಉತ್ತಮ ಕೃಷಿಪತ್ತಿನ ಸಹಕಾರ ಸಂಘ ಪ್ರಶಸ್ತಿ ಮತ್ತು 2023-24ನೇ ಸಾಲಿನಲ್ಲಿ ದ.ಕ ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಮ೦ಗಳೂರು ಇದರ ಕುಂದಾಪುರ ಶಾಖೆಯಿಂದ ಅತ್ಯಧಿಕ ಮೌಲ್ಯದ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಿ ಸದಸ್ಯರಿಗೆ ವಿತರಿಸಿದ ಬಗ್ಗೆ ಪ್ರಶಸ್ತಿ ದೊರಕಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವರದಿ ಮಂಡಿಸಿ, ಅಂಕಿ ಅಂಶಗಳನ್ನು ವಿವರಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಹಂದೆ, ನಿರ್ದೇಶಕರಾದ ಜಿ. ತಿಮ್ಮಪೂಜಾರಿ, ಟಿ. ಮಂಜುನಾಥ, ಕೆ. ಉದಯ ಕುಮಾರ್ ಶೆಟ್ಟಿ, ಮಹೇಶ್ ಶೆಟ್ಟಿ ಎಮ್., ರಶ್ಮಿತಾ, ರಂಜಿತ್ ಕುಮಾರ್, ಚಂದ್ರ ಪೂಜಾರಿ, ವಸಂತಿ ಪೂಜಾರಿ, ಅಜಿತ್ ದೇವಾಡಿಗ, ಪ್ರೇಮ, ದಿನಕರ ಶೆಟ್ಟಿ, ಶೇಖರ ಮರಕಾಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿರ್ದೇಶಕ ಟಿ.ಮಂಜುನಾಥ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವಂದಿಸಿದರು.
ಈ ಸಂದರ್ಭದಲ್ಲಿ ಸಕಲ ಕೃಷಿ ಸಾಮಾಗ್ರಿಗಳ ಪ್ರದರ್ಶನ, ಮಾರಾಟ, ಉಚಿತ ನೇತ್ರ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.















