ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಶಿಕ್ಷಕರು ವಿದ್ಯಾರ್ಥಿಗಳಿಗೆ ತರಗತಿಯ ಪಠ್ಯವನ್ನು ಮಾತ್ರವೇ ಕಲಿಸದೇ, ಅವರಲ್ಲಿ ಮೌಲ್ಯವನ್ನು ಬಿತ್ತುವ, ಕೌಶಲ್ಯ & ಆತ್ಮವಿಶ್ಬಾಸ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ. ಆಧುನಿಕ ಶಿಕ್ಷಣ ಕ್ರಮಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿಯೂ ಅವರ ಮೇಲಿದೆ ಎಂದು ರೋಟರಿ ಝೋನ್ 01ರ ಮಾಜಿ ಸಹಾಯಕ ಗವರ್ನರ್ ಸೋಮನಾಥನ್ ಆರ್. ಹೇಳಿದರು.

ಅವರು ರೋಟರಿ ಕ್ಲಬ್ ಬೈಂದೂರು ನೇತೃತ್ವದಲ್ಲಿ ಮಂಗಳವಾರ ಇಲ್ಲಿನ ಅಂಬಿಕಾ ಇಂಟರ್ ನ್ಯಾಷನಲ್ ಹೋಟೆಲಿನಲ್ಲಿ ಆಯೋಜಿಸಲಾದ ರೋಟರಿ ಕುಟುಂಬ ಸಮ್ಮಿಲನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ ಸಮಾಜ ಸುಧಾರಣೆಯಲ್ಲಿ ಶಿಕ್ಷಕರ ಕೊಡುಗೆ ಅಪಾರ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿ.ಎನ್. ಬಿಲ್ಲವ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ತಿಮ್ಮಪ್ಪ ಗಾಣಿಗ ತಗ್ಗರ್ಸೆ, ಸುಮಂಗಲಾ ಗಾಣಿಗ ಬೀಜಮಕ್ಕಿ, ಜಗದೀಶ್ ಶೆಟ್ಟಿ ಹೆಮ್ಮಾಡಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸದಸ್ಯ ಶಿಕ್ಷಕರನ್ನು ಗೌರವಿಸಲಾಯಿತು.
ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಝೋನ್ 01ರ ಸಹಾಯಕ ಗವರ್ನರ್ ಐ. ನಾರಾಯಣ, ವಲಯ ಸೇನಾನಿ ಪ್ರಸಾದ್ ಪ್ರಭು, ವಲಯ ಕಾರ್ಯದರ್ಶಿ ಗೋವಿಂದ ಎಂ., ಉದ್ಯಮಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ರೋಟರಿ ಸದಸ್ಯ ರಾಘವೇಂದ್ರ ಉಡುಪ ಪ್ರಾರ್ಥಿಸಿ, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ವಂದಿಸಿದರು.















