ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇವಸ್ಥಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತರು ದೇವರ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ತಾರೆಕೊಡ್ಲು ಬಳಿ ಕಡವೆಯೊಂದು ಚಲಿಸುವ ಬೈಕಿಗೆ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಶ್ರೇಯಸ್ ಮೊಗವೀರ (22) ಮೃತಪಟ್ಟ ಘಟನೆ ವರದಿಯಾಗಿದೆ. ಗಂಭೀರ ಗಾಯಗೊಂಡಿದ್ದ ಸಹಸವಾರ ವಿಘ್ನೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಮಧ್ಯಾಹ್ನ ಕಾವ್ರಾಡಿಯ ಶ್ರೇಯಸ್ ಹಾಗೂ ವಿಘ್ನೇಶ್ ಇಬ್ಬರು ಬೈಕಿನಲ್ಲಿ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜಿ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕಮಲೆಶಿಲೆ – ಸಿದ್ಧಾಪುರ ರಸ್ತೆಯಲ್ಲಿ ಬೈಕಿನಲ್ಲಿ ಬರುತ್ತಿದ್ದ ಸಂದರ್ಭ ತಾರೆಕೊಡ್ಲು ಎಂಬಲ್ಲಿ ಕಡವೆಯೊಂದು ಬೈಕ್ ಮೇಲೆ ಹಾರಿದ್ದು, ನಿಯಂತ್ರಣ ತಪ್ಪಿದ ಬೈಕ್ ರಸ್ತೆಯ ಪಕ್ಕದಲ್ಲಿ ಬಿದ್ದಿದೆ. ಸ್ಥಳೀಯರು ತಕ್ಷಣ ಇಬ್ಬರನ್ನೂ ಸಿದ್ಧಾಪುರ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶ್ರೇಯಸ್ʼನನ್ನು ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆಯೇ ಶ್ರೇಯಸ್ ಮೃತಪಟ್ಟಿದ್ದಾರೆ.
ಬೈಕ್ ಮೇಲೆ ಹಾರಿದ ಕಡವೆ ಸಹ ಮೃತಪಟ್ಟಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










