ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ತಾಲೂಕಿನ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಇವರ ಆಶ್ರಯದಲ್ಲಿ ಮಹಿಳಾ ಟೈಲರಿಂಗ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಹಾಗೂ ಉದ್ಯಮ ಶೀಲತಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ದೆಹಲಿ ಗ್ರಾಮೀಣಾಭಿವೃದ್ಧಿ ಹಣಕಾಸು ಸಚಿವಾಲಯ ನಿರ್ದೇಶಕರಾದ ಶೈಲೇಶ್ ಕುಮಾರ್ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತರಬೇತಿಯು ನಮ್ಮನ್ನು ಸದೃಢರನ್ನಾಗಿಸಲು ಸಹಕಾರಿಯಾಗಿದೆ. ಮಹಿಳೆಯರು ಜೀವನೋಪಾಯಕ್ಕಾಗಿ ಸ್ವ ಉದ್ಯೋಗವನ್ನು ಕೈಗೊಂಡು ಸ್ವಾವಲಂಬನೆಯ ಜೀವನವನ್ನು ನಡೆಸಲು ಇಂತಹ ತರಬೇತಿಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಸಾಧ್ಯ.

ಮನೆಯ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿರೋ ಅದೇ ರೀತಿ ಸ್ವಂತ ಉದ್ಯಮವನ್ನು ಕೈಗೊಂಡು ಸ್ವಾವಲಂಬನೆಯ ಬದುಕು ಸಾಗಿಸುವುದು ಮಹಿಳೆಯರಿಗೆ ಕಷ್ಟವೇನಲ್ಲ. ನಾವು ಸ್ವತಂತ್ರರಾದಷ್ಟು, ಮಕ್ಕಳಿಗೂ ಶಿಸ್ತುಬದ್ಧ ಜೀವನ ನಡೆಸುವಂತೆ ತಿಳಿಸಲು ಸಾಧ್ಯವಾಗುತ್ತದೆ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ, ಸರಕಾರದಿಂದ ಮತ್ತು ಬ್ಯಾಂಕುಗಳಿಂದ ಸಿಗುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಸಮಾಜದಲ್ಲಿ ಒಬ್ಬ ಯಶಸ್ವಿ ಉದ್ಯಮಿಗಳಾಗಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನು ವಿತರಿಸಿ, ಶುಭ ಹಾರೈಸಿದರು.
ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ. ಎಂ. ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸ್ವಂತ ಉದ್ಯಮವನ್ನು ಕೈಗೊಂಡರೆ ಸಮಾಜದಲ್ಲಿ ಗೌರವ, ಪ್ರಾಶಸ್ತ್ಯ ದೊರೆಯುತ್ತದೆ. ಮನಸ್ಸಿಗೆ ನೆಮ್ಮದಿ, ಶಿಸ್ತು ಬದ್ಧ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ. ಸರಕಾರದ ಉತ್ತಮ ಯೋಜನೆಗಳು ಮಹಿಳೆಯರಿಗೆ ಪೂರಕವಾಗಿ ಕೆಲಸವನ್ನು ಮಾಡುತ್ತಿದೆ. ಅದರ ಸದ್ಭಳಕೆ ಮಾಡಿದಲ್ಲಿ ಮಾತ್ರವೇ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಲಭಿಸಲು ಸಾಧ್ಯ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಟೈಲರಿಂಗ್ ಅತಿಥಿ ಉಪನ್ಯಾಸಕಿ ವೀಣಾ, ಬ್ಯೂಟಿ ಪಾರ್ಲರ್ ಅತಿಥಿ ಉಪನ್ಯಾಸಕಿ ರಾಜಲಕ್ಷ್ಮಿ, ಸದಸ್ಯರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಸಂತೋಷ್ ಕಾರ್ಯಕ್ರಮವನ್ನು ನಿರೂಪಿಸಿ, ಉಪನ್ಯಾಸಕಿ ಚೈತ್ರ . ಕೆ ಸ್ವಾಗತಿಸಿ, ಕಛೇರಿ ಸಹಾಯಕರಾದ ಶಾಂತಪ್ಪ ವಂದಿಸಿದರು.















