ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಒಂದು ಗ್ರಾಮದಲ್ಲಿ ಎಲ್ಲರೂ ಆರೋಗ್ಯವಂತರಾಗಿದ್ದರೆ ಆ ಗ್ರಾಮ ಐಶ್ವರ್ಯವಂತ ಮಾದರಿ ಗ್ರಾಮ ಎನ್ನಬಹುದು. ಇಂದು ಆರೋಗ್ಯವೇ ಭಾಗ್ಯ ಈ ನಿಟ್ಟಿನಲ್ಲಿ ಈ ಆಸ್ಪತ್ರೆಯಲ್ಲಿನ ಉಚಿತ ಸೇವೆ, ಜೊತೆಯಲ್ಲಿ ಆರೋಗ್ಯದ ಅರಿವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಿಕ್ಕಯ್ಯ ಶೆಟ್ಟಿ ಹೇಳಿದರು.
ಅವರು ಆಯುಷ್ ಇಲಾಖೆ ಉಡುಪಿ, ಗ್ರಾಮ ಪಂಚಾಯತ್ ಕಾಲ್ತೋಡು, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು, ಆಯುಷ್ಮಾನ್ ಆರೋಗ್ಯ ಮಂದಿರ ಕಾಲ್ತೋಡು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ 10ನೇ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಮತ್ತು ಎನ್.ಸಿ.ಡಿ ಕ್ಯಾಂಪ್‌ನ್ನು ಉದ್ಘಾಟಿಸಿ ಮಾತನಾಡಿದರು.

ಅಲ್ಲದೆ ಹಿಂದೆ ನಮ್ಮ ಹಿರಿಯರು ಆಯುರ್ವೇದ ರೀತಿಯ ಜೀವನಶೈಲಿ ಆಹಾರ ಪದ್ಧತಿ ಪಾಲಿಸುತ್ತಿದ್ದರು. ಪರಿಣಾಮ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿ ನೂರು ಕಾಲ ಬಾಳುತ್ತಿದ್ದರು ಆದರೆ ಹಿಂದಿನ ಜೀವನಶೈಲಿ ಬದಲಾಗಿದೆ. ಮನುಷ್ಯ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ಆಯುರ್ವೇದದ ಮಹತ್ವವನ್ನ ತಿಳಿದು ಅನುಸರಿಸಿ ಆರೋಗ್ಯವಂತರಾಗಿ ಬಾಳಿ ಎಂದು ಹತ್ತನೇ ಆಯುರ್ವೇದ ದಿನಾಚರಣೆಗೆ ಶುಭಾಶಯ ಕೋರಿದರು.
ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಇಲ್ಲಿಯ ವೈದ್ಯಾಧಿಕಾರಿಗಳಾದ ಡಾ. ವೀಣಾ ಕಾರಂತ್ ಅವರು 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ “ಜನರಿಗಾಗಿ ಮತ್ತು ಜಗತ್ತಿಗಾಗಿ” ಎನ್ನುವ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿರುವ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರದ ಉದ್ದೇಶ ಜೊತೆಯಲ್ಲಿ ಆಯುರ್ವೇದೋಕ್ತ ದಿನಚರ್ಯೆ, ಋತುಚರ್ಯೆ, ಅಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಆಯುರ್ವೇದ ದಿನಾಚರಣೆಯ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಸಾರ್ವಜನಿಕರಿಗೆ ಆಯುಷ್ ಇಮ್ಯೂನಿಟಿ ಕಿಟ್ ಹಾಗೂ ಔಷಧಿ ಸಸ್ಯಗಳನ್ನ ವಿತರಿಸಲಾಯಿತು. ಆಯುಷ್ಮಾನ್ ಆರೋಗ್ಯ ಮಂದಿರದ ಯೋಗ ತರಬೇತುದಾರರಾದ ಶೇಖರ್ ಶೆಟ್ಟಿ, ಸರಸ್ವತಿ ಕುಲಾಲ್ ಅವರು ಸಾರ್ವಜನಿಕರಿಗೆ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಜೊತೆಯಲ್ಲಿ ಪ್ರಾಣಾಯಾಮ ಯೋಗದ ಮಹತ್ವವನ್ನ ತಿಳಿಸಲಾಯಿತು.


ವೇದಿಕೆಯಲ್ಲಿ ಕಾಲ್ತೋಡು ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಾದ ಆನಂದ ಬಿಲ್ಲವ, ಕಾಲ್ತೋಡು ಗ್ರಾ.ಪಂ ಸದಸ್ಯ ಶೇಖರ್ ಶೆಟ್ಟಿ, ಕಿರಿಮಂಜೇಶ್ವರ ಪ್ರಾ.ಆ.ಕೇ. ಸಿಎಚ್ಓ ಸುಭಾಸ್ ಉಪಸ್ಥಿತರಿದ್ದರು.
ನಂತರ ಸಾರ್ವಜನಿಕರ ರಕ್ತದೊತ್ತಡ, ಮಧುಮೇಹ ಪರೀಕ್ಷೆ ನೆಡೆಸಲಾಯಿತು. ಜೊತೆಯಲ್ಲಿ ಆರೋಗ್ಯ ತಪಾಸಣೆ ನೆಡೆಸಿ ಆಯುರ್ವೇದ ಚಿಕಿತ್ಸೆ ನೀಡಲಾಯಿತು.
ಪಿ.ಎಚ್.ಸಿ.ಒ ಪ್ರತಿಮಾ, ಆಶಾ ಕಾರ್ಯಕರ್ತೆಯರು, ಸ.ಆ.ಚಿ ಕಾಲ್ತೋಡು ಸಿಬ್ಬಂದಿಗಳಾದ ನಾಗದೀಪ, ಸರಸ್ವತಿ, ವಿಶಾಲ ಕಾರ್ಯಕ್ರಮಕ್ಕೆ ಸಹಕರಿಸಿದರು. ಡಾ. ವೀಣಾ ಕಾರಂತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಶೇಖರ್ ಶೆಟ್ಟಿ ವಂದಿಸಿದರು.
















