ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬರವಣಿಗೆ ಉತ್ತಮವಾಗಿರಬೇಕಾದರೆ ಒಳ್ಳೆಯ ಓದುಗರಾಗಿರಬೇಕು ಎಂದು ಉದಯವಾಣಿ ಪತ್ರಿಕೆಯ ಕುಂದಾಪುರದ ಉಪ ಮುಖ್ಯ ವರದಿಗಾರರಾದ ಲಕ್ಮೀ ಮಚ್ಚಿನ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗವು ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪ್ರ 89.6 ಎಫ್. ಎಮ್ ಇವರ ಸಹಯೋಗದಲ್ಲಿ ನಡೆಸಿದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪತ್ರಿಕಾ ಬರವಣಿಗೆಯ ತಂತ್ರಗಳು ಕುರಿತು ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು.
ಬರವಣಿಗೆ ಎನ್ನುವುದು ಎಲ್ಲರಿಗೂ ಅವಶ್ಯಕ. ಮುಖ್ಯವಾಗಿ ಪತ್ರಿಕೆಯ ಬರವಣಿಗೆಯಲ್ಲಿ ಶೀರ್ಷಿಕೆ, ಪ್ರಸ್ತಾವನೆ ಮತ್ತು ವಿಸ್ತ್ರತ ಮಾಹಿತಿಗಳು ಮುಖ್ಯವಾಗಿರುತ್ತದೆ. ಬರಹಗಳನ್ನು ಬರೆಯುವುದಕ್ಕೆ ಆಸಕ್ತಿಯ ಜೊತೆಗೆ ಉತ್ತಮ ಓದು ವಿಷಯದ ಕುರಿತ ತಿಳುವಳಿಕೆ ಬೇಕಾಗುತ್ತದೆ. ಕೆಲವು ನುಡಿಚಿತ್ರ ಮತ್ತು ಲೇಖನಗಳ ಉದಾಹರಣೆ ತೋರಿಸಿ ಅದರ ಸ್ವಾರಸ್ಯಕರ ಶಿರ್ಷಿಕೆಗಳು, ವಿಷಯವನ್ನು ಹೇಳಿರುವ ಬಗೆಯನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಮಾತನಾಡಿ, ಪತ್ರಿಕಾ ರಂಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗ. ಪತ್ರಿಕೆಗಳಿಂದ ಕ್ರಾಂತಿಯೇ ಸೃಷ್ಟಿಯಾಗಿದೆ ಎಂದರು.
ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ನಾಯ್ಕ ಉಪಸ್ಥಿತರಿದ್ದರು. ಸಿಂಚನ ಮತ್ತು ಶ್ವೇತ ಪ್ರಾರ್ಥನೆಗೖದರು. ಅಮೃತ ಪರಿಚಯಿಸಿದರು. ವಿದ್ಯಾರ್ಥಿಗಳಾದ ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿ, ಶ್ರಾವ್ಯ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ವಿದ್ಯಾರ್ಥಿ ಸತ್ಯನ್ ಕಾಂಚನ್ ವಂದಿಸಿದರು.















