ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿರಂತರ ಕಲಿಕೆ ಸಾಧ್ಯವಾದಾಗ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ. ಅದರಲ್ಲಿಯೂ ಸಂಶೋಧನಾತ್ಮಕ ಕಲಿಕೆಗೆ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಸಂಸ್ಥೆಯಲ್ಲಿ ಸಂಶೋಧನಾರ್ಥಿಗಳು ಹೆಚ್ಚಾದಷ್ಟು ಸಂಸ್ಥೆಯ ಮೌಲ್ಯ ಹೆಚ್ಚುತ್ತದೆ ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಕ್ಷೇಮಪಾಲನಾ ಸಮಿತಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಕೊತ್ತಾಡಿ ಉಮೇಶ್ ಶೆಟ್ಟಿ ಅವರಿಗೆ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೊತ್ತಾಡಿ ಉಮೇಶ್ ಶೆಟ್ಟಿ ಅವರು ಕೊಯಮತ್ತೂರಿನ ಭಾರತೀಯಾರ್ ವಿಶ್ವವಿದ್ಯಾನಿಲಯದಿಂದ “ಕರಾವಳಿ ಕರ್ನಾಟಕದಲ್ಲಿರುವ ಗ್ರಾಮೀಣ ಮಹಿಳಾ ಉದ್ಯಮಿಗಳಿಗಿರುವ ಅವಕಾಶಗಳು ಮತ್ತು ಸವಾಲುಗಳು”ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಅವರ ಧರ್ಮಪತ್ನಿ ಪೂರ್ಣಿಮಾ ಶೆಟ್ಟಿ, ಪುತ್ರಿ ಪೂರ್ವಿ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿಗಳಾದ ಸೀತಾರಾಮ ನಕ್ಕತಾಯ ಶುಭ ಹಾರೈಸಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಕಾಲೇಜಿನ ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ ಅಭಿನಂದನಾ ಪತ್ರ ವಾಚಿಸಿದರು. ಸಿಬ್ಬಂದಿ ಕ್ಷೇಮಪಾಲನಾ ಸಮಿತಿಯ ಕಾರ್ಯದರ್ಶಿಗಳಾದ ಮಹೇಶ್ ನಾಯ್ಕ್ ವಂದಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ರೇಷ್ಮಾ ಶೆಟ್ಟಿ ನಿರೂಪಿಸಿದರು.















