ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ತನ್ನ ವೈಯಕ್ತಿಕ ಜೀವನಕ್ಕಾಗಿ ಏನನ್ನು ಬಯಸದೆ ಸಮಾಜಕ್ಕಾಗಿಯೇ ಜೀವನವನ್ನು ಸಮರ್ಪಿಸಿಕೊಂಡ ಜೀವನದ ಯಶೋಗಾಧೆ ಅತ್ಯಮೂಲ್ಯವಾದದ್ದು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಸೋಮವಾರ ಕೋಟದ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಾಂಸ್ಕೃತಿಕ ಚಿಂತಕ, ಶಿಕ್ಷಕ ಸಂತೋಷ್ ಕುಮಾರ್ ಕೋಟ ಸಹಾಯರ್ಥವಾಗಿ ಅವರ ಕುಟುಂಬಕ್ಕೆ ನೆರವಾಗುವ ಯಕ್ಷಗಾನ ಕಾರ್ಯಕ್ರಮದಲ್ಲಿ ನಿಧಿ ಹಸ್ತಾಂತರಿಸಿ ಮಾತನಾಡಿದರು.
ಜೀವನದಲ್ಲಿ ಪ್ರತಿಕ್ಷಣ ಪ್ರತಿಜೀವ ಕೂಡಾ ಮಹತ್ವವಾದದ್ದು. ಈ ಹಿನ್ನಲ್ಲೆಯಲ್ಲಿ ಪ್ರತಿಯೊಬ್ಬರು ಸಂಚಾರ ವ್ಯವಸ್ಥೆಯಲ್ಲಿ ರಕ್ಷಣೆ ಬೇಕಾಗುವ ಪರಿಕರವನ್ನು ಕಟ್ಟುನಿಟ್ಟಾಗಿ ಧರಿಸಿಕೊಳ್ಳಿ, ನೀವು ನಿಮ್ಮ ಜೀವದ ಬಗ್ಗೆ ಚಿಂತಿಸದಿದ್ದಾಗ ಮನೆಯವರ ಪಾಡು ಶೋಚನೀಯ ವ್ಯವಸ್ಥೆಗೆ ತಲುಪುತ್ತದೆ. ಈ ದಿಸೆಯಲ್ಲಿ ಅವರ ಕುಟುಂಬಕ್ಕೆ ನೆರವಾಗುವ ಇಂತಹ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಮಾತನಾಡಿ, ಸಂತೋಷ್ ಕುಮಾರ್ ವ್ಯಕ್ತಿತ್ವ ಹಾಗೂ ಅವರಿಗೆ ಸಮಾಜದ ಬಗ್ಗೆ ಇದ್ದ ಕಾಳಜಿ, ಶಿಕ್ಷಣದ ಬಗ್ಗೆ ಇದ್ದ ಅವರ ಪ್ರೇಮವನ್ನು ಸಭೆಯಲ್ಲಿ ನುಡಿತೋರಣದ ಮೂಲಕ ಬಿಚ್ಚಿಟ್ಟರು.
ಇದೇ ವೇಳೆ ಸಂತೋಷ್ ಕುಮಾರ್ ಕುಟುಂಬಕ್ಕೆ ನೀಡಬೇಕಾದ ನೆರವಿನ ಸುಮಾರು 5.50ಲಕ್ಷ ರೂಗಳ ನಿಧಿಯನ್ನು ಅವರ ಸಂಬಂಧಿಕರಾದ ಮಹೇಶ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಬಿಜು ನಾಯರ್, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ನಿರ್ದೇಶಕರಾದ ಜಿ.ತಿಮ್ಮ ಪೂಜಾರಿ, ಸಿಇಒ ಶರತ್ ಕುಮಾರ್ ಶೆಟ್ಟಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಯಕ್ಷ ಚಿಂತಕ ಎಸ್.ವಿ ಉದಯ್ ಕುಮಾರ್ ಶೆಟ್ಟಿ, ಬೇಳೂರು ರಾಘವ ಶೆಟ್ಟಿ, ದಸಂಸ ಮುಖಂಡ ಶ್ಯಾಮಸುಂದರ್ ತೆಕ್ಕಟ್ಟೆ, ರಾಜು ಬೆಟ್ಟಿನ ಮನೆ, ಕಾರ್ಯಕ್ರಮ ಸಂಘಟಕರಾದ ಜಯರಾಮ ಶೆಟ್ಟಿ, ಪ್ರಭಾಕರ್ ಪಡುಕರೆ, ನಾಗರಾಜ್ ಪಡುಕರೆ, ಮಂಜುನಾಥ್ ಭಂಡಾರಿ, ಸಾಮಾಜಿಕ ಕಾರ್ಯಕರ್ತ ಕೆ.ದಿನೇಶ್ ಗಾಣಿಗ ಮತ್ತಿತರರು ಇದ್ದರು.
ಕಾರ್ಯಕ್ರಮವನ್ನು ಸಂಘಟಕ ನ್ಯಾಯವಾದಿ ಟಿ. ಮಂಜುನಾಥ್ ಗಿಳಿಯಾರು ನಿರ್ವಹಿಸಿದರು. ನಂತರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸುಧನ್ವಮೋಕ್ಷ ಯಕ್ಷಗಾನ ಪ್ರದರ್ಶಗೊಂಡಿತು.















