ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವ ಸಲುವಾಗಿ ‘ವಿಧಿಕ್ತ-2025’ ಅಂತರ್-ತರಗತಿ ಸ್ಪರ್ಧೆಯ ಉದ್ಘಾಟನೆ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.
ಮೂಟ್ಕೋರ್ಟ್ ಮಾದರಿ ಆಧಾರಿತ ಈ ಕಾರ್ಯಕ್ರಮವನ್ನು ಕುಂದಾಪುರ ಎಜುಕೇಶನ್ ಸೊಸೈಟಿ ರಿ., ಕುಂದಾಪುರ ಇದರ ಕಾರ್ಯದರ್ಶಿಗಳಾದ ಸೀತಾರಾಮ ನಕ್ಕತಾಯ ನ್ಯಾಯ ದೇವತೆಯ ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟಿಯನ್ನು ಬಿಡಿಸುವ ಮೂಲಕ ಚಾಲನೆ ನೀಡಿ, ಎಲ್ಲಾ ವಿದ್ಯಾರ್ಥಿಗಳಿಗೂ ಕಾನೂನು ಮಾಹಿತಿ ಅಗತ್ಯ ಮತ್ತು ಕಾನೂನು ಶಿಕ್ಷಣದ ಅರಿವು ಮಹತ್ವವಾದದ್ದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಆಶಯ ನುಡಿಗಳನ್ನಾಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ವಿ. ಭಟ್ ಪ್ರಾಸ್ತಾವಿಸಿದರು. ವಿದ್ಯಾರ್ಥಿನಿ ಮನೀಷಾ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಯೋಜಕರಾದ ಸತೀಶ್ ಶೆಟ್ಟಿ ಹೆಸ್ಕುತ್ತೂರು ಸ್ವಾಗತಿಸಿ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಪೃಥ್ವಿಶ್ರೀ ಜಿ. ಶೆಟ್ಟಿ ನಿರೂಪಿಸಿ, ಜೋಸ್ಲಿನ್ ರೆನಿಟಾ ಡಿ. ಅಲ್ಮೇಡಾ ವಂದಿಸಿದರು.










