ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2025-26ನೇ ಶೈಕ್ಷಣಿಕ ಸಾಲಿನ ಪ್ರಾಕ್ತನ ವಿದ್ಯಾರ್ಥಿ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಮುಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.
ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ನಾವಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲೇಜು ಅಭಿವೃದ್ಧಿಗೆ ಪ್ರಾಕ್ತನ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ. ಪ್ರಾಕ್ತನ ವಿದ್ಯಾರ್ಥಿಗಳು ಸಂಸ್ಥೆಯ ಜೊತೆ ನಿರಂತರ ಒಡನಾಟ ಇಟ್ಟುಕೊಂಡಾಗ ಸಂಸ್ಥೆಯ ಬೆಳವಣಿಗೆ ಸಾಧ್ಯ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ನೂತನ ಪ್ರಾಕ್ತನ ವಿದ್ಯಾರ್ಥಿ ಸಂಘದ ಪರಿಕಲ್ಪನೆಯಲ್ಲಿ ಮೂಡಿ ಬರಲಿರುವ ಪ್ರಾಕ್ತನಯಾನ ಹಾಗೂ ಯಶೋದೀಪ ಯೋಜನೆಗೆ ಚಾಲನೆ ನೀಡಿದರು. ಉಪ-ಪ್ರಾಂಶುಪಾಲ ಡಾ. ಚೇತನ ಶೆಟ್ಟಿ ಕೋವಾಡಿ ಆಶಯದ ನುಡಿಗಳನ್ನಾಡಿದರು ಮತ್ತು ಆಡಳಿತ ನಿಕಾಯಕ ರಕ್ಷಿತ್ ರಾವ್ ಗುಜ್ಜಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಾಕ್ತನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೊತ್ತಾಡಿ ಉಮೇಶ್ ಶೆಟ್ಟಿ ಅವರು ಕೊಯಮತ್ತೂರಿನ ಭಾರತೀಯಾರ್ ವಿಶ್ವವಿದ್ಯಾನಿಲಯದಿಂದ “ಕರಾವಳಿ ಕರ್ನಾಟಕದಲ್ಲಿರುವ ಗ್ರಾಮೀಣ ಮಹಿಳಾ ಉದ್ಯಮಿಗಳಿಗಿರುವ ಅವಕಾಶಗಳು ಮತ್ತು ಸವಾಲುಗಳು” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಸಂಘದ ಜೊತೆ ಕಾರ್ಯದರ್ಶಿ ವಿದ್ಯಾವತಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ದರ್ಶನ್ ಉಪಸ್ಥಿತರಿದ್ದರು.
ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ಶಾನುಭೋಗ್ ಕಾವ್ರಾಡಿ ಪ್ರಸ್ತಾವಿಸಿದರು, ಪ್ರಾಕ್ತನಾ ವಿದ್ಯಾರ್ಥಿನಿ ಅಂಕಿತ ಶೇಟ್ ಪ್ರಾರ್ಥಿಸಿದರು. ಖಜಾಂಚಿ ಸಚಿನ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷೆ ಜೋಸ್ಲಿನ್ ಅಲ್ಮೇಡಾ ವಂದಿಸಿದರು.















