ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ಪಟ್ಟಣಪಂಚಾಯತ್ ಅಭಿವೃದ್ಧಿ ಪಥಕ್ಕೆ ಸುವರ್ಣ ಮಹೋತ್ಸವ ಮುನ್ನುಡಿ ಬರೆಯಲಿ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಶನಿವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಬಯಲು ರಂಗಮಂದಿರದಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಪಟ್ಟಣಪಂಚಾಯತ್ ಸುವರ್ಣ ಪಥ ಮುಖಪುಟ ಬಿಡುಗಡೆಗೊಳಿಸಿ ಮಾತನಾಡಿದರು.
ಒಂದು ಪಟ್ಟಣಪಂಚಾಯತ್ ಅಭಿವೃದ್ಧಿ ಹೊಂದಬೇಕಾದರೆ ಆ ಕಾಲಘಟ್ಟದಲ್ಲಿ ಆಡಳಿತದಲ್ಲಿರುವ ಸರಕಾರಗಳ ಅನುದಾನದ ಮೇಲೆ ಅವಲಂಬಿತವಾಗುವುದಲ್ಲದೆ ಪ್ರಸ್ತುತ ಶಾಸಕರಾಗಿ ಅನುದಾನದ ಕೊರತೆ ಎದುರಿಸುತ್ತಿದ್ದೇವೆ. ಈ ದಿಸೆಯಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಒಂದಿಷ್ಟು ಯೋಜನೆ ಯೋಚನೆಗಳನ್ನಿರಿಸಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ಹೊಸಭಾಷ್ಯ ಬರೆದಿದೆ ಇದು ಪ್ರಶಂಸನೀಯ ಕಾರ್ಯ ಎಂದು ಸುವರ್ಣ ಮಹೋತ್ಸವಕ್ಕೆ ಶುಭಹಾರೈಸಿದರು.

ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಗಿನ ಕಾಲಘಟ್ಟದಲ್ಲಿ ಪಟ್ಟಣಪಂಚಾಯತ್ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಅಭಿವೃದ್ಧಿಯತ್ತ ಪಟ್ಟಣಪಂಚಾಯತ್ ಕೊಂಡ್ಯೊಯ್ದ ಸಂದರ್ಭವನ್ನು ನೆನಪಿಸಿ ಪ್ಲಾಸ್ಟಿಕ್ ತ್ಯಾಜ್ಯದಿಂದಗಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ಎಲ್ಲಂದರಲ್ಲಿ ಎಸೆಯದಂತೆ ಸಾರ್ವಜನಿಕರಿಗೆ ಕರೆಕೊಟ್ಟರು.
ಸಭೆಯ ಅಧ್ಯಕ್ಷತೆಯನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ವಹಿಸಿದ್ದರು.

ಸಭೆಯಲ್ಲಿ ಹಿರಿಯ ಸಾಧಕರಾದ ಕೆ. ತಾರಾನಾಥ ಹೊಳ್ಳ, ನಾರಾಯಣ ಆಚಾರ್, ಪಿ. ನರಸಿಂಹ ಐತಾಳ್, ಗುಂಡ್ಮಿ ರಾಮಚಂದ್ರ ಐತಾಳ್, ಪದ್ಮನಾಭ ಶೆಟ್ಟಿಗಾರ್, ಡಾ. ಹರೀಷ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಅಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ. ಸುನೀತಾ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ, ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ್ ಸಿ. ಕುಂದರ್, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳ್ಳಹಳ್ಳಿ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ಸಾಹಿತಿ ಎಎಸ್ಎನ್ ಹೆಬ್ಬಾರ್, ಪಟ್ಟಣಪಂಚಾಯತ್ ಪ್ರತಿಪಕ್ಷದ ನಾಯಕ ಶ್ರೀನಿವಾಸ್ ಅಮೀನ್, ಪಟ್ಟಣಪಂಚಾಯತ್ ಉಪಾಧ್ಯಕ್ಷೆ ಗಿರೀಜಾ ಪೂಜಾರಿ, ಸದಸ್ಯರಾದ ರವೀಂದ್ರ ಕಾಮತ್, ಶ್ಯಾಮಸುಂದರ್ ನಾಯರಿ, ಸುಲತಾ ಎಸ್. ಹೆಗ್ಡೆ, ರೇಖಾ.ಕೆ. ಕರ್ಕೇರ, ಪುನಿತ್ ಪೂಜಾರಿ, ಗಣೇಶ್ ಕಾರ್ಕಡ, ಭಾಸ್ಕರ್ ಬಂಗೇರ, ಅನುಸೂಯ ಹೇರ್ಳೆ, ಸಂಜೀವ ದೇವಾಡಿಗ ಉಪಸ್ಥಿತರಿದ್ದರು.
ಪಟ್ಟಣಪಂಚಾಯತ್ ಸದಸ್ಯ ರಾಜು ಪೂಜಾರಿ ಸ್ವಾಗತಿಸಿದರು. ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ ನಿರೂಪಿಸಿದರು.
ಮೆರವಣಿಗೆ, ಎಂಆರ್‌ಎಫ್ ಘಟಕ ಲೋಕಾರ್ಪಣೆ:
ಸುವರ್ಣ ಮಹೋತ್ಸವದ ಅಂಗವಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾಷ್ಟ್ರೀಯ ಹೆದ್ದಾರಿಯ ಮೂಲಕ ಪಟ್ಟಣಪಂಚಾಯತ್ ವರೆಗೆ ಮೆರವಣಿಗೆಯ ಮೂಲಕ ಗಣ್ಯರನ್ನು ಕರೆತರಲಾಯಿತು. ನಂತರ ಪಾರಂಪಳ್ಳಿ ವಿಷ್ಣಮೂರ್ತಿ ವಾಡ್೯ನಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳಿಸಿದ ಘನ ತ್ಯಾಜ್ಯ ಘಟಕ, ಎಂಆರ್ ಎಂ ಘಟಕವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಗೊಳಿಸಿದರು.
ಪಟ್ಟಣ ಪಂಚಾಯತ್ ಮುಂಭಾದಲ್ಲಿ ನಿರ್ಮಾಣಗೊಂಡ ಸಾಹಿತಿ ಡಾ. ಕೋಟ ಶಿವರಾಮ ಕಾರಂತ, ಗಾನಕೋಗಿಲೇ ಭಾಗವತ ದಿ.ಕಾಳಿಂಗ ನಾವಡ, ಪಟ್ಟಣಪಂಚಾಯತ್ ಸ್ಥಳ ದಾನಿ ಪಿ. ಜನಾರ್ದನ ಮಧ್ಯಸ್ಥ ಇವರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಲಾಯಿತು.















