ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವದ ನಿಮಿತ್ತ ನ. 28ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬರಲಿದ್ದು, ಆ ಸಂಬಂಧ ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಸಭೆ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿ ಅವರು ಆಗಮಿಸುವ ಸಂದರ್ಭದಲ್ಲಿ ಸ್ಥಳೀಯವಾಗಿ ವಾಹನ ನಿಲುಗಡೆ, ಸಂಚಾರ ವ್ಯವಸ್ಥೆ ಇತ್ಯಾದಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕಾರ್ಯಕ್ರಮಕ್ಕೆ ಬರುವ ಭಕ್ತರಿಗೂ ಯಾವುದೇ ಸಮಸ್ಯೆ ಆಗದಂತೆಯೂ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಇತ್ಯಾದಿ ಸಲಹೆಗಳನ್ನು ನೀಡಿದರು.

ಶಾಸಕರಾದ ವಿ. ಸುನಿಲ್ ಕುಮಾರ್, ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಲಿ, ಗುರುರಾಜ್ ಗಂಟಿಹೊಳೆ ಮೊದಲಾದವರು ಭದ್ರತೆ, ಸುರಕ್ಷೆ ಹಾಗೂ ಕಾರ್ಯಕ್ರಮ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಹಲವು ಸಲಹೆ ಸೂಚನೆ ನೀಡಿದರು.
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ – ಬೃಹತ್ ಗೀತೋತ್ಸವ ನಡೆಯಲಿದ್ದು, ಪ್ರಧಾನಿ ಜತೆಗೆ ವೇದಿಕೆಯಲ್ಲಿ ಯಾರೆಲ್ಲ ಉಪಸ್ಥಿತರಿರಬೇಕು ಎಂಬುದನ್ನು ಗೊಂದಲ ಇಲ್ಲದೇ ಸ್ಪಷ್ಟಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಶೆಟ್ಟಿ ಕುತ್ಯಾರು, ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.
















