ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಇಲ್ಲಿ ವ್ಯವಹಾರ ಕ್ಷೇತ್ರದಲ್ಲಿ ಕಾನೂನು ಎಂಬ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಜುನಾಥ ಗಿಳಿಯಾರ್ ಮಾತನಾಡಿ, ಪ್ರತಿಯೊಬ್ಬ ನಾಗರಿಕರಿಗೂ ಕಾನೂನಿನ ಅರಿವಿನ ಅಗತ್ಯ ಇದೆ. ಕಾನೂನನ್ನ ಅರಿತುಕೊಂಡು ಅದನ್ನು ಗೌರವಿಸಿ ಜೀವನ ನಡೆಸಿದಾಗ ಚಿಂತೆ ಮುಕ್ತ ಜೀವನ ನಮ್ಮದಾಗುತ್ತದೆ. ಪ್ರತಿಯೊಂದು ಕಾನೂನು ನಮಗೆ ಜವಾಬ್ದಾರಿ ಮತ್ತು ಹಕ್ಕುಗಳನ್ನು ನೀಡುತ್ತದೆ. ಕಾನೂನು ನಮ್ಮ ದೈನಂದಿನ ಜೀವನ ಹಾಗೂ ಸಾಮಾಜಿಕ ವ್ಯವಹಾರಿಕ ಬದುಕಿನಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ವ್ಯವಹಾರ ಕ್ಷೇತ್ರದಲ್ಲಿ ಕಾನೂನನ್ನು ಸರಿಯಾಗಿ ಪಾಲಿಸಿದಾಗ ಮಾತ್ರ ಉದ್ಯಮವು ನಿರೀಕ್ಷಿತ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ನೀಡುವ ಸಲುವಾಗಿ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಕಾನೂನು ಅರಿವನ್ನು ಪಡೆದುಕೊಂಡು ಅದನ್ನು ಜೀವನದಲ್ಲಿ ಸೂಕ್ತ ರೀತಿಯಲ್ಲಿ ಅಳವಡಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಸಮಾಜದಲ್ಲಿ ಗೌರವದಿಂದ ಜೀವನ ನಡೆಸುವಂತಾಗಬೇಕು ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ನಾಗರಾಜ ಯು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಧಿಕಾರಿ ನಾಗರಾಜ ವೈದ್ಯ ಎಂ., ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಶೇಖರ ಬಿ., ಹಾಗೂ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಕಾರ್ತಿಕ್ ಪೈ, ಗ್ರಂಥಪಾಲಕರಾದ ರವಿಚಂದ್ರ ಹೆಚ್.ಎಸ್, ಹಾಗೂ ಉಪನ್ಯಾಸಕರಾದ ಉಜ್ವಲ ಶೆಟ್ಟಿ, ಸಾವಿತ್ರಿ, ಪಲ್ಲವಿ ಉಪಸ್ಥಿತರಿದ್ದರು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ. ಉದಯ ಶೆಟ್ಟಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಶಾ ಸ್ವಾಗತಿಸಿದರು. ನಿಕಿತ ಕಾರ್ಯಕ್ರಮ ನಿರೂಪಿಸಿದರು. ಅನುಷಾ ವಂದಿಸಿದರು.















