ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿ ಜೀವನವೇ ಅಮೂಲ್ಯವಾದದ್ದು. ಈ ಸಂದರ್ಭದಲ್ಲಿ ಏನನ್ನು ಕಲಿಯುತ್ತೀರೋ ಅದನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡಾಗ ಬದುಕು ಉತ್ತಮವಾಗಿರಲು ಸಾಧ್ಯ. ಅದನ್ನು ಕಲಿತುಕೊಳ್ಳಬೇಕಾದ ಸೂಕ್ತ ಸಮಯವಿದು. ನಿಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಿ, ಗುರಿಯೆಡೆಗೆ ಸಾಗುವ ಪರಿಶ್ರಮ ಇರಲಿ. ಮಾತು, ನಗು, ನಡತೆ ಸಂಸ್ಕಾರಯುತವಾಗಿರಲಿ ಎಂದು ಮಂಗಳೂರಿನ 92.7 ಬಿಗ್ ಆರ್‌ಜೆ ನಯನಾ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಜೀವನ ಮೌಲ್ಯ ಉಪನ್ಯಾಸ ಮಾಲಿಕೆ – 2ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಜೀವನ ಮೌಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ತಿಳಿಸಿದರು.
ಈ ಸಂದರ್ಭ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಮೀಳ ಅತಿಥಿಗಳನ್ನು ಪರಿಚಯಿಸಿ, ಮಾನ್ಯ ಪ್ರಾರ್ಥಿಸಿ, ಖುಷಿ ಸ್ವಾಗತಿಸಿ, ರೋನಿತ್ ಶೆಟ್ಟಿ ನಿರೂಪಿಸಿದರು.










