ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: “ವಿದ್ಯಾರ್ಥಿಗಳು ಮೊಬೈಲ್ ನ ಅತಿಯಾದ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳುವ ಸಮಯವನ್ನು ಕಡಿಮೆ ಮಾಡಿ ಮನೋದೈಹಿಕ ಉಲ್ಲಾಸ ತರುವ ಚಟುವಟಿಕೆಗಳಲ್ಲಿ ನಿರತರಾಗಬೇಕು. ನಿತ್ಯಜೀವನದಲ್ಲಿ ಆ ಮೂಲಕ ಹುರುಪು ಪಡೆದು ಪೋಷಕರು ಹೆಮ್ಮೆ ಪಡುವಂಥ ಸಾಧನೆ ಮಾಡಬೇಕು” ಎಂದು ಹೊಸೂರಿನ ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಸಂತೋಷ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಆರ್.ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು ಹಾಗೂ ಬೈಂದೂರಿನ ಮಾಜಿ ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಸಿ.ಇ.ಎಸ್ ಸಂಸ್ಥೆಗಳ ಸುವರ್ಣ ಸಂಭ್ರಮದ ವಿಶೇಷ ವರ್ಷದಲ್ಲಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತುಂಬು ಸಂಭ್ರಮದಿಂದ ಮುಂಬರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆನ್ನುತ್ತಾ ಕ್ರೀಡೋತ್ಸವಕ್ಕೆ ಶುಭಕೋರಿದರು.
ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಯವರಾದ ಸೀತಾರಾಮ ನಕ್ಕತ್ತಾಯ ಅವರು, ಜೊತೆ ಕಾರ್ಯದರ್ಶಿ ಸುಧಾಕರ ಶೆಟ್ಟಿ ಭಾಂಡ್ಯ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಮ್ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಗ್ಲೀಷ್ ಉಪನ್ಯಾಸಕಿ ರೂಪಾ ವೆರ್ಣೇಕರ್ ಕ್ರೀಡಾಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನೀಸ್ ನತಾಷಾ ಡಿಸೋಜಾ ಅವರು ಪಥ ಸಂಚಲನ ಕಾರ್ಯಕ್ರಮ ನಿರ್ವಹಿಸಿದರು. ದ್ವಿತೀಯ ಪಿ.ಯು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿಂಚನಾ ಪ್ರತಿಜ್ಞಾ ವಿಧಿ ಬೋಧಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅರುಣಾ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಇಂಗ್ಲೀಷ್ ಉಪನ್ಯಾಸಕಿ ಸುಮತಿ ಶೆಣೈ ವಂದನಾರ್ಪಣೆ ಗೈದರು.
ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಂಶಿತ್, ಸಪ್ತಮಿ ಹಾಗೂ ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ಕೀರ್ತನಾ ಅವರು ಕ್ರೀಡಾಗ್ರೇಸರರಾಗಿ ಮೂಡಿಬಂದರು.















