ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿದ್ದಾಪುರ ಏತ ನೀರಾವರಿ ಯೋಜನೆಗೆ ವಾರಾಹಿ ಮೂಲ ನದಿಯಿಂದ ನೀರನ್ನು ಎತ್ತುವ ಮೂಲಕ ವಾರಾಹಿ ಮೂಲ ನದಿಯನ್ನು ಉಳಿಸುವುದರೊಂದಿಗೆ ನದಿ ಪಾತ್ರ ಅವಲಂಭಿತ ರೈತರನ್ನು ಹಾಗೂ ಧಾರ್ಮಿಕ ಕೇಂದ್ರಗಳನ್ನು ಉಳಿಸುವಂತೆ ವಾರಾಹಿ (ಹಾಲಾಡಿ) ಪಾತ್ರದ ಇಕ್ಕೆಲಗಳ ರೈತರು ಹಾಗೂ ಸಾರ್ವಜನಿಕರು ಇತ್ತೀಚಿಗೆ ವಾರಾಹಿ ಇಲಾಖೆಗೆ ಭೇಟಿ ನೀಡಿ, ಮನವಿ ಮಾಡಿದರು.
ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ಬಳ್ಕೂರು ಅವರ ನೇತ್ರತ್ವದಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆಯ ನೀರನ್ನು ಎತ್ತುವ ಪಂಪನ್ನು ವಾರಾಹಿ ಮೂಲ ನದಿಯಲ್ಲಿ ಅಥವಾ ಶ್ರೀ ಹೊಳೆ ಶಂಕರನಾರಾಯಣ ದೇವಸ್ಥಾನದ ಕೆಳ ಭಾಗದಲ್ಲಿ ಅಳವಡಿಸುವಂತೆ ನೂರಾರು ರೈತರ ಸಹಿ ಮಾಡಿದ ಪತ್ರದೊಂದಿಗೆ ರೈತರು, ಧಾರ್ಮಿಕ ಮುಖಂಡರು, ಕೃಷಿಕರು, ವಿವಿಧ ಸಂಘಟನೆಯ ಮುಖಂಡರು ಸಿದ್ದಾಪುರದ ವಾರಾಹಿ ಇಲಾಖೆಯ ಕಚೇರಿ ಭೇಟಿ ನೀಡಿ ಮನವಿ ಮಾಡಿದರು.

ಹೊಳೆ ಶಂಕರನಾರಾಯಾಣ ಬಳಿ ವಾರಾಹಿ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂ ಮೇಲ್ ಭಾಗದಲ್ಲಿ ಆರಂಭಗೊಳ್ಳುವುದರಿಂದ ವಾರಾಹಿ ಮೂಲ ನದಿಯಲ್ಲಿ ನೀರಿಗೆ ಬರವಾಗಿ ಕೊಡಲಿ ಏಟು ನೀಡಿದ್ದಂತಾಗುತ್ತದೆ. ಇದರಿಂದ ಭವಿಷ್ಯದಲ್ಲಿ ವಾರಾಹಿ ಮೂಲ ನದಿ ಕಣ್ಮರೆಯಾಗಲಿದೆ ಎಂದು ರೈತರ ಆತಂಕವಾಗಿದೆ.
ಸಿದ್ದಾಪುರ ಏತ ನೀರಾವರಿ ಯೋಜನೆಗೆ ವಿರೋಧ ಇಲ್ಲ. ಯೋಜನೆ ಅನುಷ್ಠಾನ ಮಾಡುವಾಗ ಮೂಲ ನದಿಯಲ್ಲಿ ನೀರು ಹರಿಯುವ ಹಾಗೇ ಅನುಷ್ಠಾನ ಮಾಡಬೇಕು. ಹೊಳೆ ಶಂಕರನಾರಾಯಾಣ ಬಳಿಯ ಡ್ಯಾಂ ಮೇಲು ಭಾಗಗಳಿಂದ ಎಲ್ಲಾ ಯೋಜನೆಗಳಿಗೆ ನೀರು ಎತ್ತ್ತುವುದರಿಂದ ವಾರಾಹಿ ಮೂಲ ನದಿಯಲ್ಲಿ ನೀರಿನ ಕೊರತೆಯಾಗಿ ಜಲ ಚರಗಳ ಸಂಕುಲಗಳು ಸಂಕಷ್ಟಕ್ಕೆ ಸಿಲುಕಲ್ಲಿದೆ. ನದಿ ಪಾತ್ರದ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳಲ್ಲಿದೆ. ನದಿ ಪಾತ್ರದ ದೇಗುಲಗಳಿಗೂ ನೀರಿನ ಕೊರತೆ ಉಂಟಾಗಲಿದೆ ಎಂದರು.
ಹೊಸಂಗಡಿ ಗ್ರಾಮದ ಹೊಳೆ ಶಂಕರನಾರಾಯಣ ಬಳಿ ಹೋರಿಅಬ್ಬೆ ಡ್ಯಾಂ ನಿಂದ ಈಗಾಗಲೇ ವಿವಿಧ ಯೋಜನೆಗಳಿಗೆ 10 ಟಿ.ಎಂ.ಸಿ ನೀರು ಬೇಕಾಗುತ್ತದೆ. ಈಗ ಹೊಸದಾಗಿ ಆರಂಭಗೊಂಡಿರುವ ಸಿದ್ದಾಪುರ ಏತ ನೀರಾವರಿ ಯೋಜನೆಗೆ ೬೫೦ಕ್ಕೂ ಹೆಚ್ಚು ಅಶ್ವಶಕ್ತಿಯ ವಿದ್ಯುತ್ ಮೋಟರನ್ನು ಅಳವಡಿಸಿ ನೀರನ್ನು ಪಂಪ್ ಮಾಡುವುದರಿಂದ ವಾರಾಹಿ ಮೂಲ ನದಿಯಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಹೋರಿಅಬ್ಬೆ ಡ್ಯಾಂನಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರಿನ ಶೇಖರಣೆ ಪ್ರಮಾಣ ಕೂಡ ಕಡಿಮೆ ಇದೆ. ಮೂಲ ನದಿಯ ನೀರನ್ನು ನಂಬಿಕೊಂಡು ಉಳ್ಳೂರು-74 ಗ್ರಾಮದ ಜಾಂಬೂರು ಬಳಿ 600 ಕೋಟಿ ರೂ.ವ್ಯಚ್ಚದ ಜಲ ಜೀವನ ಮಿಶನ್ ಯೋಜನೆ ನಡೆಯುತ್ತಿದೆ. ಹಾಲಾಡಿ ಗ್ರಾಮದ ಭರತ್ಕಲ್ ನಲ್ಲಿ ನಡೆಯುತ್ತಿರುವ ಉಡುಪಿ ನಗರಕ್ಕೆ, ಕಾರ್ಕಳಕ್ಕೆ ಕುಡಿಯುವ ನೀರಿನ ಯೋಜನೆಗೆ ತೊಂದರೆಯಾಗುತ್ತದೆ. ಜಪ್ತಿ ಬಳಿ ಕುಂದಾಪುರ ಪುರಸಭೆಗೆ ಕುಡಿಯುವ ನೀರಿಗೂ ಕೂಡ ತೊಂದರೆಯಾಗುತ್ತದೆ ಎಂದು ಹೇಳಿದರು.
ಹೊಳೆ ಶಂಕರನಾರಾಯಣ ಬಳಿ ಹೋರಿಅಬ್ಬೆ ಡ್ಯಾಂನ ಕೆಳ ಭಾಗದಿಂದ ಅಥವಾ ಹೊಳೆ ಶ್ರೀ ಶಂಕರನಾರಾಯಣ ದೇವಸ್ಥಾನದ ಕೆಳ ಭಾಗದ ಮೂಲ ನದಿಯಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆಯ ನೀರನ್ನು ಎತ್ತುವ ಪಂಪ್ ಹೌಸ್ ನಿರ್ಮಿಸಿದಲ್ಲಿ ಈ ನಡೆಯುತ್ತಿರುವ ಎಲ್ಲಾ ತಿಕ್ಕಾಟಗಳು ಕೊನೆಗೊಳ್ಳುತ್ತದೆ. ಹಾಲಾಡಿ ನದಿ ಭತ್ತಿ ಬರಿದಾಗುವುದು ತಪ್ಪುತ್ತದೆ. ಜನ ಜೀವನ, ಪ್ರಾಣಿ ಪಕ್ಷಿಗಳಿಗೆ, ಜಲಚರಗಳಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ಬಳ್ಕೂರು, ಬಿ.ಕೆ ಶ್ರೀನಿವಾಸ ಸೌಡ, ರಾಮಚಂದ್ರ ದೇವಾಡಿಗ ಶಂಕರನಾರಾಯಣ, ಶಂಕರ್ ಮೊಗವೀರ ಹಾಲಾಡಿ ಸೇರಿದಂತೆ ನದಿ ಪಾತ್ರದ ರೈತರು, ಧಾರ್ಮಿಕ ಮುಖಂಡರು, ಕೃಷಿಕರು, ವಿವಿಧ ಸಂಘಟನೆಯ ಮುಖಂಡರು ವಾರಾಹಿ ಇಲಾಖಾಽಕಾರಿಗಳಿಗೆ ಮನವಿ ಮಾಡಿದರು.
ವಾರಾಹಿ ನೀರಾವರಿ ಇಲಾಖೆಯ ಎಇಇ ಕಿರಣ್ ಪಡ್ತಿ ಅವರು ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ಮನವಿಯನ್ನು ಸರಕಾರಕ್ಕೆ, ಮೇಲಿನ ಅಽಕಾರಿಗಳಿಗೆ, ಸಂಬಂಧ ಪಟ್ಟವರಿಗೆ ತಿಳಿಸುವುದಾಗಿ ಹೇಳಿದರು.















