ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಉಳ್ಳೂರು-74ರಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2.5 ಕೋಟಿ ರೂ. ವೆಚ್ಚದಲ್ಲಿ 14 ಕೊರಗ ಕುಟುಂಬಗಳಿಗೆ ನಿರ್ಮಿಸಲಾದ ಹೊಸ ಮನೆಗಳ ಗೃಹ ಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಗುರುವಾರ ನಡೆಯಿತು.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗೃಹ ಪೂಜೆ ಮತ್ತು ಆಶೀರ್ವಚನ ಮಾಡಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡಿದೆ. ಇನ್ನೂ ರಾಮರಾಜ್ಯ ಕಲ್ಪನೆ ಸಾಕಾರಗೊಳ್ಳಬೇಕಿದೆ. ಸಮಾಜದ ಕಟ್ಟ ಕಡೆಯ ಪ್ರಜೆಗಳು ಎಂದು ಕರೆಸಿಕೊಳ್ಳುವ ತೀರ ಹಿಂದುಳಿದ ಕೊರಗ ಜನಾಂಗಕ್ಕೆ ಮನೆ ನಿರ್ಮಸಿ ಕೊಡುವ ಕಾರ್ಯ ಶ್ರೇಷ್ಠ ಕಾರ್ಯವಾಗಿದೆ. ಈ ಮೂಲಕ ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳುತ್ತಿದೆ. ಕೊರಗರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿರುವ ಸೇವೆಯನ್ನು ಅಯೋಧ್ಯೆಗೆ ತೆರಳಿ, ರಾಮನ ಪದತಲಕ್ಕೆ ಅರ್ಪಿಸುತ್ತೇನೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ನುಡಿದರು.

ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಜಿ ಅವರು ಸಮಾರಂಭದ ಉದ್ಘಾಟನೆ ಮತ್ತು ಗೃಹಗಳ ಹಸ್ತಾಂತರ ಮಾಡಿ ಮಾತನಾಡಿದ ಅವರು ಸರಕಾರ ಮತ್ತು ಸಂಘಟನೆ ಮಾಡಬೇಕಾದ ಕೆಲಸವನ್ನು ಎಚ್.ಎಸ್ ಶೆಟ್ಟಿ ಮಾಡುತ್ತಿದ್ದಾರೆ. ಸಮಾಜ ಸೇವಾ ಕಾರ್ಯಕ್ಕೆ ಧನ್ಯವಾದ ಸಮರ್ಪಣೆ ಇಲ್ಲದಿದ್ದರೂ ಸಮಾಜ ಸೇವಾ ಕಾರ್ಯ ಮಾಡುತ್ತಾ ಇರುತ್ತಾರೆ. ಅದರಿಂದಾಗಿಯೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಮನೆ ನಿರ್ಮಿಸಿಕೊಡುತ್ತಿದ್ದಾರೆ ಎಂದರು.
ಚಿತ್ರದುರ್ಗ ಚೆನ್ನಯ್ಯ ಮಾದರ ಗುರುಪೀಠದ ಶ್ರೀ ಡಾ| ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಅವರು ಲೋಕಾರ್ಪಣೆ ಮತ್ತು ಆಶಯ ಭಾಷಣ ಮಾಡಿದರು.


ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ| ಎಚ್.ಎಸ್ ಶೆಟ್ಟಿ ಅವರು ಮಾತನಾಡಿ, ಸಮಾಜದಲ್ಲಿನೊಂದ ಹಾಗೂ ಆತ್ಯಂತ ಹಿಂದುಳಿದವರು ಕೊರಗರು. ಈ ಕೊರಗ ಜನಾಂಗ ಮುಖ್ಯವಾಹಿನಿಗೆ ಬರಬೇಕು ಎಂದರು.
ಸಂಸದ ಬಿ.ವೈ ರಾಘವೇಂದ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ ಗಂಟಿಹೊಳೆ, ಕಿರಣ್ ಕುಮಾರ ಕೊಡ್ಗಿ, ಯಶಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಭರತ್ ಶೆಟ್ಟಿ ಮಂಗಳೂರು, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಕರ್ನಾಟಕ-ಕೇರಳ ಕೊರಗಾಭಿವೃದ್ಧಿ ಸಂಸ್ಥೆಗಳ ಅಧ್ಯಕ್ಷೆ ಸುಶೀಲ ನಾಡ, ಉಳ್ಳೂರು-74 ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಶೆಟ್ಟಿ ಉಳ್ಳೂರು-74 ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಮೊತ್ತೇಸರ ಸಂಜೀವ ಶೆಟ್ಟಿ ಸಂಪಿಗೇಡಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಉಪಾಧ್ಯಕ್ಷ ನಾಗರಾಜ ಶೆಟ್ಟಿ, ಹಾಲಾಡಿ ಉಪಸ್ಥಿತರಿದ್ದರು.















