ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಸದುದ್ದೇಶದಿಂದ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಗಂಗೊಳ್ಳಿ ಮೂಲದ ಕುಂದಾಪುರದ ವಕೀಲರಾದ ಬದರೀನಾಥ ಹೆಚ್. ಹುಂಡೇಕಾರ್ ಅವರು ವಿದ್ಯಾರ್ಥಿಗಳೊಂದಿಗೆ ಪೋಕ್ಸೋ ಕಾಯಿದೆಯ ಬಗ್ಗೆ ಚರ್ಚಿಸುತ್ತಾ, ವಿದ್ಯಾರ್ಥಿಗಳಿಗೆ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಅರಿವನ್ನು ಮೂಡಿಸುತ್ತಾ ಸದಾ ಅಧ್ಯಯನದಲ್ಲಿ ನಿರತರಾದರಷ್ಟೇ ಸಾಲದು, ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಎದುರಿಸುವ ಮಾರ್ಗಗಳನ್ನು ಅರಿಯಬೇಕು. ದೇಶದ ಪ್ರತಿಯೊಬ್ಬ ಪ್ರಜೆಗೂ ಬಹಳಷ್ಟು ಕರ್ತವ್ಯಗಳು ಮತ್ತು ಹಕ್ಕುಗಳು ನೀಡಲ್ಪಟ್ಟಿರುತ್ತವೆ. ಅವುಗಳ ಪಾಲನೆ ಮತ್ತು ರಕ್ಷಣೆಗೆ ಪೋಲೀಸ್ ಇಲಾಖೆ ಸಹಕರಿಸಿದಂತೆ ನ್ಯಾಯಬದ್ಧ ತೀರ್ಮಾನಕ್ಕಾಗಿ ನ್ಯಾಯಾಲಯಗಳು ಪ್ರಜೆಗಳಿಗೆ ಸಹಕರಿಸುತ್ತವೆ.

ಮಕ್ಕಳು ಅನ್ಯಾಯ ಹೊಂದಿದಲ್ಲಿ ಅವರ ಸಹಕಾರಕ್ಕೆ ವಕೀಲರಾದ ನಾವು ಸದಾ ಕಟಿಬದ್ಧರಾಗಿರುತ್ತೇವೆ. ಈ ಶಾಲೆಯ ಪ್ರಾಕ್ತನ ವಿದ್ಯಾರ್ಥಿಯಾಗಿದ್ದು, ಈ ಶಾಲೆಯ ನಿಯಮಗಳನ್ನು ನಾನೂ ಅರಿತಿದ್ದೇನೆ. ಇಲ್ಲಿ ಭಾವಾಂತರಂಗ, ತಾಲೂಕು ಮಟ್ಟದ ಸ್ಪರ್ಧೆಗಳು, ಇನ್ನಿತರ ಸ್ಪರ್ಧೆಗಳು ವಿದ್ಯಾರ್ಥಿಗಳ ಹಿತಕ್ಕಾಗಿಯೇ ನಡೆಸಲ್ಪಡುತ್ತವೆ. ಅದೆಲ್ಲದರಲ್ಲೂ ಭಾಗವಹಿಸಬೇಕು. ಶುದ್ಧವಾದ ಆಹಾರ, ನೀರು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕಾಗಿದ್ದು, ಶಾಲೆಯು ಅದನ್ನು ನೀಡುತ್ತಿದೆ. ಇಲ್ಲಿನ ಆಡಳಿತ ವ್ಯವಸ್ಥೆ ಮತ್ತು ನಿರ್ವಹಣೆಯು ಅತ್ಯುತ್ತಮವೇ ಆಗಿದೆ. ತಮ್ಮ ಗೊಂದಲಗಳ ಪರಿಹಾರಕ್ಕೆ ಆಪ್ತಸಮಾಲೋಚಕರನ್ನು ಸಹ ಶಾಲೆ ನಿಯೋಜಿಸಿದೆ ಎನ್ನುತ್ತಾ ಮಕ್ಕಳ ಅಹವಾಲುಗಳಿಗೆ ಸೂಕ್ತ ಉತ್ತರಗಳನ್ನು ನೀಡಿ, ತಮ್ಮ ಜೀವನಾನುಭವದ ಘಟನೆಗಳ ಮೂಲಕ ಮಕ್ಕಳ ಮನಸ್ಸಿಗೆ ಸ್ಥೈರ್ಯವನ್ನು ನೀಡಿದರು.
ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಕಾರ್ಯಕ್ರಮದಲ್ಲಿ ನಮ್ಮ ವಿದ್ಯಾರ್ಥಿಗಳನ್ನು ನಾವು ಹೀಗೆ ಸಾಧಕರನ್ನಾಗಿಯೇ ನೋಡ ಬಯಸುತ್ತೇವೆ. ನಾವು ಜೀವನದಲ್ಲಿ ಸಿಕ್ಕೆಲ್ಲ ಅವಕಾಶಗಳನ್ನು ಬಳಸಿಕೊಂಡು, ಶಿಸ್ತನ್ನು ಮೈಗೂಡಿಸಿಕೊಂಡು ಸಜ್ಜನರಾಗಿ ಬದುಕಬೇಕು ಎಂದು ಮಕ್ಕಳಿಗೆ ತಿಳಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ -ಶಿಕ್ಷಕೇತರವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಸಂಯೋಜಕಿಯಾದ ಸವಿತಾ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.















