ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2026ರ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಜಿಲ್ಲಾದ್ಯಂತ ಇಲಾಖೆ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಡುವೆ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರಿಸಲಾದ ಪೊಲೀಸ್ ಟೆಂಟ್ ಹೌಸ್ ಮಾತ್ರ ಸಾರ್ವಜನಿಕರ ಗಮನ ಸೆಳೆಯುತ್ತಿದೆ.



ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದಲ್ಲಿ ಸಡಕ್ ಸುರಕ್ಷಾ ಜೀವನ್ ರಕ್ಷಾ ಎಂಬ ಘೋಷಣೆ ಅಡಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಂತೆಕಟ್ಟೆಯಲ್ಲಿ ಪಿಎಸ್‌ಐ ಅನಿಲ್ ಹಾಗೂ ಪೊಲೀಸ್ ಸಿಬ್ಬಂದಿಗಳು ವಾಹನ ಚಾಲಕರುಗಳನ್ನು ಹೂ ಗುಚ್ಚ ನೀಡಿ ಆಹ್ವಾನಿಸಿ, ಅವರ ಆದ್ಯತೆಗೆ ತಕ್ಕಂತೆ ಚಹಾ, ತಿಂಡಿ, ತಂಪುಪಾನೀಯಗಳನ್ನು ನೀಡಿ ಬಳಿಕ ಅವರಿಗೆ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವುದರ ಬಗ್ಗೆ ಮತ್ತು ವಾಹನ ಚಲಾಯಿಸುವ ಬಗ್ಗೆ ಮತ್ತು ಅಪಘಾತ ನಿಯಂತ್ರಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಏಳು ದಿನಗಳ ಕಾಲ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ದಿನದ 24 ಗಂಟೆಗಳ ಕಾಲ ಅರಿವೂ ಮೂಡಿಸುವ ಕಾರ್ಯ ನಡೆಯಲಿದೆ.



ಉಡುಪಿ ಜಿಲ್ಲಾ ಪೊಲೀಸ್ ಎಸ್ಪಿ ಹರಿರಾಮ್ ಶಂಕರ್ ಐಪಿಎಸ್ ನಿರ್ದೇಶನದಂತೆ, ಉಡುಪಿ ಡಿವೈಎಸ್ಪಿ ಪ್ರಭು ಡಿ ಟಿ, ಹಾಗೂ ಮಲ್ವೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಮಲ್ಪೆ ಠಾಣೆಯ ಪಿಎಸ್‌ಐ ಅನಿಲ್ ಮತ್ತು ಪೊಲೀಸ್ ಸಿಬ್ಬಂದಿಗಳ ತಂಡ ಅರಿವು ಕಾರ್ಯದಲ್ಲಿ ತೊಡಗಿದೆ.










