ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಸ್ತೆ ಸುರಕ್ಷಾ ನಿಯಮವನ್ನು ಪಾಲಿಸುವುದರಿಂದ ಸಾರ್ವಜನಿಕರು ಧೈರ್ಯದಿಂದ ಓಡಾಡಬಹುದು. ಅಪಘಾತ ಮುಕ್ತ ಸಮಾಜ ನಿರ್ಮಿಸಬಹುದು ಹಾಗೂ ಅಮಾಯಕರ ಸಾವು ನೋವುಗಳನ್ನು ತಡೆಗಟ್ಟಲು ಸಾಧ್ಯ. ಈ ನೆಲೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಅಳವಡಿಸಿಕೊಂಡು ದೈನಂದಿನ ಚಟುವಟಿಕೆಯಲ್ಲಿ ಈ ನಿಯಮಗಳನ್ನು ಪಾಲಿಸಬೇಕು ಎಂದು ಕುಂದಾಪುರ ಸರ್ಕಲ್ ಇನ್ಸಪೆಕ್ಟರ್ ಜಯರಾಮ ಗೌಡ ಹೇಳಿದರು.

ಅವರು ಸ್ಥಳೀಯ ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ರಸ್ತೆ ಸುರಕ್ಷಾ ಸಪ್ತಾಹದ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುವುದು ಸರಿಯಾದ ದಾಖಲೆಗಳಿಲ್ಲದೆ ವಾಹನ ಚಲಾಯಿಸುವುದು, ಅತಿವೇಗವಾಗಿ ಚಲಾಯಿಸುವುದು, ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುವುದು ಕಾನೂನು ಪ್ರಕಾರ ತಪ್ಪು. ಈ ಕಾನೂನುಗಳನ್ನು ಉಲ್ಲಂಘಿಸದೇ ವಾಹನ ಸವಾರರು ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮದ ಮಹತ್ವವನ್ನು ವಿವರಿಸಿದರು. ಪೋಲಿಸ್ ಕಾನ್ಸ್ಟೆಬಲ್ ಗಿರೀಶ್, ಕಾಲೇಜಿನ ಬೋಧಕ ಹಾಗೂ ಬೋಧಕೇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










