ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: “ಸಾಹಿತ್ಯ ಸಂಗೀತಗಳೆರಡು ಸರಸ್ವತಿ ದೇವಿಯ ಸ್ತನದ್ವಯಗಳು ಎಂಬ ಉಕ್ತಿಯಿದೆ. ಸಾಹಿತ್ಯ ಮತ್ತು ಸಂಗೀತಗಳು ಮೇಳೈಸಿದಾಗ ಮನೋರಂಜನೆಯೊಂದಿಗೆ ಬೌದ್ಧಿಕ ವಿಕಾಸವೂ ಸಾಧ್ಯವಾಗುವುದು. ಪುರಾತನ ಮತ್ತು ನವೀನ ಕವಿ ಸಾಹಿತ್ಯಗಳ ರಾಗ ಭಾವಪೂರ್ಣ ಓದು ಗಮಕ ಕಲೆಯಾಗಿ ಪರಂಪರೆಯಿಂದ ಬೆಳೆದುಬಂದಿದೆ. ಯುವ ಜನತೆ ಗಮಕದತ್ತ ಒಲಿದು ಬರಬೇಕು” ಎಂದು ತಾಲೂಕು ಘಟಕ ಗಮಕ ಕಲಾಪರಿಷತ್ತಿನ ಅಧ್ಯಕ್ಷ ಎಚ್. ಸುಜಯೀಂದ್ರ ಹಂದೆ ಹೇಳಿದರು.

ಅವರು ಕೋಟದ ಸು.ವಿ.ಕಾ. ಸಾಂಸ್ಕೃತಿಕ ಸಂಘಟನೆಯ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಮನೆಯಲ್ಲಿ ನಡೆದ ಅಕಾಡೆಮಿಯ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಂದರ್ಭದಲ್ಲಿ ನಡೆಸಿದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಘವಾಂಕ ಕವಿಯ ಹರಿಶ್ಚಂದ್ರ ಚರಿತ್ರೆಯ ವಿರೂಪಾಕ್ಷ ಸಾಕ್ಷಾತ್ಕಾರ ಭಾಗವನ್ನು ಗಮಕಿ ಕಾವ್ಯ ಹಂದೆ ವಾಚಿಸಿದರು. ಸುಜಯೀಂದ್ರ ಹಂದೆ ವ್ಯಾಖ್ಯಾನ ಮಾಡಿದರು.
ಜಿ.ಎಸ್. ವಿ.ಎಸ್. ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶೀನಾಥ್ ಪೈ, ಕಲಾ ಸಾಹಿತಿ ಜನಾರ್ದನ ಹಂದೆ, ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ರುವಾರಿ ಕೊಗ್ಗ ಭಾಸ್ಕರ ಕಾಮತ್, ಸು.ವಿ.ಕಾ.ದ ಅಧ್ಯಕ್ಷರಾದ ವಿನೀತ ಉಪಸ್ಥಿತಿರಿದ್ದರು.










