ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 115ನೇ ತಿಂಗಳ ಕಾರ್ಯಕ್ರಮ, ಹನ್ನೊಂದನೇ ವಾರ್ಷಿಕೋತ್ಸವ ಹಾಗೂ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ- 2026 ಪ್ರದಾನ ಸಮಾರಂಭ ಇತ್ತೀಚೆಗೆ ಗೊಂಬೆ ಮನೆಯಲ್ಲಿ ವಿಜೃಂಭಣೆಯಿಂದ ಜರುಗಿತು.
ಶ್ರೀ ಏಕನಾಥೇಶ್ವರಿ ಭಜನಾ ಮಂಡಳಿ, ಕುಂದೇಶ್ವರ ಅವರು ವಿಷ್ಣು ಸಹಸ್ರನಾಮ ಪಠಿಸಿದರು. ವಸಂತಿ ಆರ್. ಪಂಡಿತ್ ಹಾಗೂ ಹಾಲ್ಮಕ್ಕಿ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ, ಗಂಗೊಳ್ಳಿ ಇವರ ಭಜನಾ ಕಾರ್ಯಕ್ರಮ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು.

ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ಡಾ. ಕೆ. ಕಿಶೋರ್ ಕುಮಾರ್ ಶೆಟ್ಟಿ ಅವರು ದೀಪ ಬೆಳಗಿಸಿ, ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2026ನ್ನು ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನ್‌ದಾಸ್ ಶೆಣೈ ಅವರಿಗೆ ಪ್ರದಾನ ಮಾಡಲಾಯಿತು. ನಂತರ ಅಂತರಾಷ್ಟ್ರೀಯ ಜಾದೂಗಾರ ಸತೀಶ್ ಹೆಮ್ಮಾಡಿ, ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 70 ವರ್ಷ ವಾದ್ಯಗಾರರಾಗಿ ಸೇವೆ ಸಲ್ಲಿಸಿದ ಸಂಜೀವ ದೇವಡಿಗ ಅವರನ್ನು ಸನ್ಮಾನಿಸಲಾಯಿತು.
ಉಪ್ಪಿನಕುದ್ರು ಗೊಂಬೆಯಾಟ ತಂಡದ ಹಿರಿಯ ಸೂತ್ರಧಾರಿ ವೆಂಕಟರಮಣ ಬಿಡುವಾಳ್ ಹಾಗೂ ರಮಾನಂದ ನಾಯ್ಕ ವಂಡ್ಸೆ ಅವರಿಗೆ ಎಮ್. ರಾಜಶ್ರೀ ಆರ್.ಪೈ ಮತ್ತು ಎಮ್. ರತ್ನಾಕರ್ ಪೈ ಹಾಗೂ ವಿಶ್ವನಾಥ್ ಕಿಣಿ, ಕುಂದಾಪುರ ರವರು ವೈದ್ಯಕೀಯ ನೆರವು ನೀಡಿದರು.
ಇನ್ಫೋಸಿಸ್ ಉದ್ಯೋಗಿ ಪ್ರತೀಕ್ಷಾ ಕಾಮತ್‌ರವರು ಉಪ್ಪಿನಕುದ್ರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಚಂದನ್ ಗೆ ಶಿಕ್ಷಣ ನಿಧಿಯಡಿಯಲ್ಲಿ ಶಾಲಾ ಸಾಮಾಗ್ರಿ ನೀಡಿದರು. ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸುವಿಕಾ ಸಾಂಸ್ಕೃತಿಕ ಸಂಘಟನೆ, ಕೋಟ ಇದರ ಕಲಾವಿದರಾದ ಸುಜಯೀಂದ್ರ ಹಂದೆ ಮತ್ತು ಕಾವ್ಯಾ ಹಂದೆ ಅವರಿಂದ ಗಮಕ ವಾಚನ ನಡೆಯಿತು.
ಮುಖ್ಯ ಅತಿಥಿಗಳಾಗಿ ಡಾ. ಕಾಶೀನಾಥ್ ಪೈ ಗಂಗೊಳ್ಳಿ, ಜನಾರ್ಧನ ಹಂದೆ, ಕರ್ನಾಟಕ ಬ್ಯಾಂಕ್ ಅಧಿಕಾರಿ (ನಿವೃತ್ತ), ಮಂಗಳೂರು, ರಾಘವೇಂದ್ರ ದೇವಡಿಗ ನೂಜಾಡಿ, ಮುಖ್ಯೋಪಾಧ್ಯಾಯರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಉಪ್ಪಿನಕುದ್ರು ಹಾಗೂ ಸವಿತ ಜಿ, ಪ್ರಬಾರ ಮುಖ್ಯ ಶಿಕ್ಷಕಿ, ಸರಕಾರಿ ಪ್ರೌಢ ಶಾಲೆ, ಉಪ್ಪಿನಕುದ್ರು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಕಾಶೀನಾಥ್ ಪೈ ಪ್ರಾರ್ಥಿಸಿದರು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ತದನಂತರ ಊರ ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ನೃತ್ಯಗಳು ಮತ್ತು ಸಂಗೀತ ನೆರೆದ ಪ್ರೇಕ್ಷಕರನ್ನು ರಂಜಿಸಿತು. ನಾಗೇಶ್ ಶ್ಯಾನುಭಾಗ್ ಮತ್ತು ರಾಜೇಂದ್ರ ಪೈ ಅವರು ಕಾರ್ಯಕ್ರಮ ನಿರ್ವಹಿಸಿದರು.
















