ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ದೊಂಬೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 9 ವರ್ಷಗಳಿಂದ ಮುಖ್ಯೋಪಾಧ್ಯಾಯನಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಎಸ್. ನಿರ್ಮಲಾ ಅವರು ವಯೋ ನಿವೃತ್ತಿ ಹೊಂದಿದ್ದು, ಕಳೆದ 28 ವರ್ಷಗಳಿಂದ ಶಿಕ್ಷಕಿಯಾಗಿ ಹಾಗೂ ಕಳೆದ 9 ವರ್ಷಗಳಿಂದ ಸದ್ವಿ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯನಿಯಾಗಿ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಶಾಲೆಯ ಅಭಿವೃದ್ಧಿ ಸಮಿತಿ ಮತ್ತು ಊರವರು ಹಾಗೂ ವಿದ್ಯಾರ್ಥಿ ವೃಂದ, ಸಹ ಶಿಕ್ಷಕ ವೃಂದದವರು ನಿರ್ಮಲಾ ಅವರಿಗೆ ಬಾಗಿನ ನೀಡಿ, ಮೈಸೂರು ಪೇಟ ತೊಡಿಸಿ, ಚಿನ್ನಉಂಗುರ ನೀಡಿ ಅಭಿನಂದಿಸಿದರು.

ಅಭಿನಂದನಾ ಸಮಾರಂಭದ ಸಭಾಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಣಿಯಮ್ಮ ಪೂಜಾರಿ ವಹಿಸಿದ್ದರು. ಅತಿಥಿಗಳಾಗಿ ಸ್ಥಳೀಯ ಪಟ್ಟಣ ಪಂಚಾಯತ್ ನ ಸರಕಾರದ ನಾಮ ನಿರ್ದೇಶಿತ ಸದಸ್ಯ ಸದಾಶಿವ ಡಿ., ಸ್ಥಳೀಯ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಬಟವಾಡಿ, ನಿವೃತ್ತ ಮುಖ್ಯ ಶಿಕ್ಷಕರಾದ ಸುರೇಶ್ ಬಂಕೇಶ್ವರ ಶಾಲಾ ಎಸ್.ಡಿ.ಎಂ.ಸಿಯ ಮಾಜಿ ಅಧ್ಯಕ್ಷರುಗಳಾದ ಸಂಜೀವ ಮೊಗವೀರ, ಶಂಕರ ಖಾರ್ವಿ, ಮೂಕಾಂಬು ಖಾರ್ವಿ, ಎಸ್.ಡಿ.ಎಂ.ಸಿಯ ಉಪಾಧ್ಯಕ್ಷೆ ಕುಸುಮಾ ಖಾರ್ವಿ, ದಾನಿಗಳಾದ ಸುಮತಿ ರಾಜು ಮೊಗವೀರ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಗಣೇಶ್ ಪೂಜಾರಿ ಹಾಗೂ ಶಾಲಾ ಎಸ್.ಡಿ.ಎಂ.ಸಿ ಯ ಸವ೯ ಸದಸ್ಯರುಗಳು, ಹಳೇ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರು ,ಇತರ ಗಣ್ಯರು ಉಪಸ್ಥಿತರಿದ್ದರು.
ಅಭಿನಂದನೆ ಸ್ವೀಕರಿಸಿದ ನಿರ್ಮಲಾ ಕೆ.ಎಸ್. ಅವರು ತನಗೆ ಸಹಕಾರ ನೀಡಿದ ಸಮುದಾಯ ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದರು. ಪ್ರಭಾರ ಮುಖ್ಯೋಪಾಧ್ಯಾಯನಿ ಜಯಂತಿ ಅವರು ಸ್ವಾಗತಿಸಿ, ಗೌರವ ಶಿಕ್ಷಕಿ ಪದ್ಮಾವತಿ ಅವರು ಅಭಿನಂದನಾ ಪತ್ರ ವಾಚಿಸಿ, ಸಹ ಶಿಕ್ಷಕ ಮೊಗವೀರ ನಿರೂಪಿಸಿದರು.











