ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ಪೋಷಕರಿಗೆ ”ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಯಲ್ಲಿ ಪೋಷಕರ ಪಾತ್ರ” ಎಂಬ ವಿಷಯದ ಕುರಿತು ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಯವರಾದ ಕೆ. ರಾಧಾಕೃಷ್ಣ ಶೆಣೈ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು.
ಉಡುಪಿ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ , ಪೋಷಕರಿಗೆ ” ಮಕ್ಕಳಿಗೆ ಒತ್ತಡವನ್ನು ಹೇರದೆ, ಅವರ ಬೇಕು ಬೇಡಗಳನ್ನು ಅರಿತು, ಸ್ನೇಹಿತರಂತೆ ವರ್ತಿಸಬೇಕು. ಪರೀಕ್ಷಾ ಸಂದರ್ಭದಲ್ಲಿ ಮಕ್ಕಳಲ್ಲಿ ಇದ್ದ ಭಯದ ವಾತಾವರಣವನ್ನು ತೊಡೆದು ಹಾಕಿ, ಸ್ವಚ್ಛಂದವಾಗಿ ಓದುವ ಪರಿಸರವನ್ನು ನಿರ್ಮಿಸಬೇಕು” ಎಂದು ತಿಳಿಸಿದರು.

ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರೇಷ್ಮಾ ಡಿಸೋಜಾ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಪ್ರಮೀಳಾ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೃಷ್ಣ ಅಡಿಗ ಅವರು ಸರ್ವರನ್ನು ಸ್ವಾಗತಿಸಿದರು. ಸಹಶಿಕ್ಷಕಿ ಕೀರ್ತಿ ರೋಸಿ ಅವರು ಕಾರ್ಯಕ್ರಮ ನಿರೂಪಿಸಿ, ಸಂಯೋಜಕ ಶಿಕ್ಷಕ ಮಾಧವ ವಂದಿಸಿದರು.










