ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಗ್ರಾಮಾಂತರ ಪಿಎಸ್‌ಐ ನಾಸೀರ್ ಹುಸೇನ್ (58) ಅವರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಉಡುಪಿ ಅಜ್ಜರಕಾಡು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಮ್ಮಪೊಲೀಸ್ ನಮ್ಮ ಹೆಮ್ಮೆ – ಕರ್ನಾಟಕ ಸೈಬರ್ ಜಾಗೃತಿಗಾಗಿ 5 ಕಿ.ಮೀ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಎಸ್‌ಐ ನಾಸೀರ್ ಹುಸೇನ್ ಸೇರಿದಂತೆ ನೂರಾರು ಪೊಲೀಸರು ಪಾಲ್ಗೊಂಡಿದ್ದು, ಹಠಾತ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಹೋದರೂ ಪ್ರಯೋಜನ ಆಗಲಿಲ್ಲ.
ದಜನಾನುರಾಗಿ ಪೊಲೀಸ್ ಎನಿಸಿಕೊಂಡಿದ್ ನಾಸಿರ್ ಹುಸೇನ್ ಅವರು ಚಿಕ್ಕಮಗಳೂರು ಮೂಲದವರು. ಭಾರತೀಯ ಸೇನೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಬಳಿಕ ರಾಜ್ಯ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳುತ್ತಾರೆ. ಅವರು ಉಡುಪಿ ಜಿಲ್ಲೆಯ ಅಮಾಸೆಬೈಲು, ಕುಂದಾಪುರ ನಗರ, ಕುಂದಾಪುರ ಸಂಚಾರ ಠಾಣೆ, ಶಂಕರನಾರಾಯಣ, ಕೊಲ್ಲೂರು, ಕಾರ್ಕಳ ಗ್ರಾಮಾಂತರ ರಾಣೆ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದರು.
ನಾಸೀರ್ ಹುಸೇನ್ ಅವರು ಶಿಕ್ಷಕಿಯಾಗಿರುವ ಪತ್ನಿ, ಇಬ್ಬರು ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದ ಕಂಡ್ಲೂರು ಮೈದಾನದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಅಂತಿಮ ದರ್ಶನದಲ್ಲಿ ಪಾಲ್ಗೊಂಡರು. ಜಿಲ್ಲಾ ಪೊಲೀಸ್ ವತಿಯಿಂದ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು.










