ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉತ್ತಮ ಚಿಂತನೆಗಳತ್ತ ಮುಖ ಮಾಡಬೇಕು. ಶಿಕ್ಷಣದ ಹಾದಿಯಲ್ಲಿ ಎದುರಾಗುವ ಸೋಲುಗಳನ್ನು ಮೆಟ್ಟಿ ನಿಂತು ಯಶಸ್ಸಿನತ್ತ ಸಾಗಬೇಕು. ಸಾಧಕ ವಿದ್ಯಾರ್ಥಿಗಳೇ ಸಮಾಜದ ಅಮೂಲ್ಯ ಆಸ್ತಿಯಾಗಬೇಕು ಎಂದು ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್. ಶೆಟ್ಟಿ ಹೇಳಿದರು.
ಅವರು ಮಂಗಳವಾರ ಇಲ್ಲಿನ ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ “ಮಧುರಂ ಸ್ಮರಣಂ” ಎಂಬ ವಿನೂತನ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿದರು.
ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವನವೆಂಬುದು ದೀರ್ಘ ಪ್ರಯಾಣವಾಗಿದ್ದು, ಅದರಲ್ಲಿನ ಸಿಹಿ-ಕಹಿ ಅನುಭವಗಳು ಸಹಜ. ಕಲಿಕೆಯ ಹಾದಿಯಲ್ಲಿ ಪಡೆದ ಧನಾತ್ಮಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಬೀಳ್ಕೊಡುಗೆ ಒಂದು ಸಿಹಿ ಕ್ಷಣವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಸಮಾಜಕ್ಕೆ ಗೌರವ ತರುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಎರಡು ವರ್ಷದ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡರು. ಸಂಸ್ಥೆಗೆ ವಿದ್ಯಾರ್ಥಿಗಳಿಂದ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಕ್ರೀಡೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ಇಡೀ ಶೈಕ್ಷಣಿಕ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿನಿ ವಿನಿಕ ವಿಜೇತರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿ ಪೌರವ್ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಜನ್ಯ ಸ್ವಾಗತಿಸಿ, ನಿತ್ಯ ವಂದಿಸಿದರು.
















