ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಸ್ತಾನ ಟೋಲ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಹಲ್ಲೆ ನಡೆಸಿ, ಕಬ್ಬಿಣದ ರಾಡ್‌ನಿಂದ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಸ್ತಾನ ಟೋಲ್ ಅಸಿಸ್ಟಂಟ್ ಮ್ಯಾನೇ ಜರ್ ಆಗಿ ಕೆಲಸ ಮಾಡುತ್ತಿರುವ ಯೋಗೀಶ್ ಕುಮಾರ್ (42) ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳವಾರ ಸಂಜೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಬಸ್ಸೊಂದು ಟೋಲ್ ಪಾವತಿಸುತ್ತಿದ್ದ ಸಂದರ್ಭ ಅದರ ಹಿಂದೆ ಕಾರಿನಲ್ಲಿ ಇದ್ದ ವ್ಯಕ್ತಿಗಳು ದಾಂಧಲೆ ನಡೆಸಿದ್ದಾರೆ.
ಕಾರಿನಲ್ಲಿದ್ದ ವೆಂಕಟೇಶ ಪ್ರಸಾದ್ ಎಂಬಾತ ಕೂಗಾಡುತ್ತಾ ಟೋಲ್ ಬ್ಯಾರಿಯರ್‌ಗೆ ಕಾಲಿನಿಂದ ಒದ್ದಿದ್ದಾನೆ. ಅಲ್ಲದೆ ಅಲ್ಲಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ದೂಡಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ಹೋದಾಗ ಕಾರಿನಲ್ಲಿದ್ದ ವಿನಾಯಕ್ ಎಂಬಾತ ಕಬ್ಬಿಣದ ರಾಡ್ ಹಿಡಿದು ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ಈ ವೇಳೆ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಪಕ್ಕಕ್ಕೆ ಸರಿದ ಕಾರಣ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಘಟನೆ ಯನ್ನು ತಡೆಯಲು ಹೋದ ಮ್ಯಾನೇಜರ್ ಯೋಗೀಶ್ ಕುಮಾರ್ ಅವರಿಗೂ ಆರೋಪಿಗಳು ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಘಟನೆಯ ಬೆನ್ನಲ್ಲೇ ಚಾಲಕ ಧನುಷ್ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










