ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಿತ್ರ ಮಂಡಳಿ, ಕೋಟ ಇವರ ವತಿಯಿಂದ ಏಪ್ರಿಲ್ 04ರಂದು ಕೋಟದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ರಿಷಿಕಾ ದೇವಾಡಿಗ ಅವರಿಗೆ “ಅಣ್ಣಾಜಿ ಬಲ್ಲಾಳ ಬಾಲ ಪುರಸ್ಕಾರ” ಪ್ರದಾನ ಮಾಡಲಾಗುತ್ತಿದೆ.
ಕುಂದಾಪುರ ತಾಲೂಕಿನ ಹಟ್ಟಿಅಂಗಡಿಯ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ರಿಷಿಕಾ ಅವರು ಬೈಂದೂರಿನ ರಾಮ ದೇವಾಡಿಗ ಮತ್ತು ರೂಪಾ ದಂಪತಿಯ ಸುಪುತ್ರಿ. ಅತಿ ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಕಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿರುವ ಅವರು ರಾಜ್ಯಮಟ್ಟದಿಂದ ಶಾಲಾಮಟ್ಟದವರೆಗೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
2025ರ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿರುವುದು ಅವರ ಸಾಹಿತ್ಯಾಸಕ್ತಿ ಮತ್ತು ನಾಯಕತ್ವವನ್ನು ತೋರಿಸುತ್ತದೆ. ‘ಮೊದಲ ಹೆಜ್ಜೆ’ ಕಥಾಸಂಕಲನ ಪುಸ್ತಕವನ್ನು ಪ್ರಕಟಿಸಿರುವ ಅವರು ಕಾರ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಬಾಲ ವಿದ್ಯಾರ್ಥಿ ಸಾಹಿತಿ’ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಭಾಷಣ, ದೇಶಭಕ್ತಿ ಗೀತಾ ವಾಚನ, ಏಕಪಾತ್ರಾಭಿನಯ ಮತ್ತು ಪುಸ್ತಕ ವಿಮರ್ಶೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ರಿಷಿಕಾ ಅವರು “ಸ್ಟಾರ್ ಕಿಡ್ಸ್” ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.










