ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತ ಸಂವಿಧಾನದ ಶಿಲ್ಪಿ, ವಿಶ್ವಜ್ಞಾನಿ ಪೂಜ್ಯ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು ಕಂಬದಕೋಣೆಯ ರಾಷ್ಟ್ರೀಯ ಹೆದ್ದಾರಿಯ ಆವರಣದಲ್ಲಿ ಮಂಗಳವಾರ ಅತ್ಯಂತ ಭವ್ಯವಾಗಿ ಆಚರಿಸಲಾಯಿತು. ಆದಿದ್ರಾವಿಡ ಸಂಘಟನಾ ಸಮಿತಿ ರಿ. ಹೇರಂಜಾಲು ಕಂಬದಕೋಣೆ ಆಶ್ರಯದಲ್ಲಿ ಈ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿದ್ದ ಎಲ್ಲಾ ಅತಿಥಿಗಳು ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ಅತಿಥಿಗಳು ತಮ್ಮ ಭಾಷಣದಲ್ಲಿ, “ಬಾಬಾಸಾಹೇಬರು ನೀಡಿದ ಸಂವಿಧಾನದ ಹಕ್ಕುಗಳು ನಮ್ಮ ಬದುಕಿನ ದಾರಿದೀಪ. ಶೋಷಿತರು ಶಿಕ್ಷಿತರಾಗಿ, ಸಂಘಟಿತರಾಗಿ, ಹೊರಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ,” ಎಂದು ಒಕ್ಕೊರಲಿನಿಂದ ಆಶಿಸಿದರು.
ನೂರಾರು ಬಂಧುಗಳು ನೀಲಿ ಶಾಲು ಧರಿಸಿ ಸಂಭ್ರಮದಲ್ಲಿ ಪಾಲ್ಗೊಂಡರು. ಮಹಿಳೆಯರು ಮತ್ತು ಯುವಜನತೆಯ ಅಭೂತಪೂರ್ವ ಭಾಗವಹಿಸುವಿಕೆಯು ಈ ಬಾರಿಯ ಜಯಂತಿಗೆ ವಿಶೇಷ ಕಳೆಯನ್ನು ತಂದಿತ್ತು. ಇದು ಕೇವಲ ಆಚರಣೆಯಾಗದೆ, ನಮ್ಮ ಹಕ್ಕುಗಳ ರಕ್ಷಣೆಗಾಗಿ ನಾವು ಸದಾ ಸಿದ್ಧ ಎಂಬ ಸಂದೇಶವನ್ನು ಇಡೀ ಜಿಲ್ಲೆಗೆ ಸಾರಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, “ನಮ್ಮ ನಡುವೆ ಇರುವ ಸಣ್ಣಪುಟ್ಟ ಭೇದಗಳನ್ನು ಮರೆತು ನಾವೆಲ್ಲರೂ ಒಂದಾಗಬೇಕಿದೆ. ದೂರದೂರಿನಿಂದ ಬಂದ ಅತಿಥಿಗಳು ಮತ್ತು ಅಧಿಕಾರಿಗಳು ನಮಗೆ ಶಕ್ತಿ ತುಂಬಿದ್ದಾರೆ. ಹಳ್ಳಿಗಳಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ನಮ್ಮ ಈ ಒಗ್ಗಟ್ಟು ನಿರಂತರವಾಗಿರಲಿದೆ,” ಎಂದು ಘೋಷಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬ ಗಣ್ಯರಿಗೂ, ಅಧಿಕಾರಿಗಳಿಗೂ ಮತ್ತು ತಮ್ಮ ಅಮೂಲ್ಯ ಸಮಯವನ್ನು ನೀಡಿದ ಸಾರ್ವಜನಿಕ ಬಂಧುಗಳಿಗೂ ಸಮಿತಿಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
















