ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ದಳಿ ಎಂಬಲ್ಲಿ ಜೀಪು ಹಾಗೂ ಇನ್ಸುಲೆಟರ್ ವಾಹನದ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಕೇರಳದ ಪ್ರವಾಸಿಗರು ಮೃತಪಟ್ಟು, 8 ಮಂದಿ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಕೊಡಚಾದ್ರಿಯಿಂದ ಕೊಲ್ಲೂರಿಗೆ ಹಿಂದಿರುಗುತ್ತಿದ್ದ ಜೀಪಿನಲ್ಲಿ ಮಕ್ಕಳು, ಚಾಲಕ ಸೇರಿದಂತೆ 10 ಮಂದಿ ಪ್ರಯಾಣಿಸುತ್ತಿದ್ದು, ಕೊಲ್ಲೂರು ಕಡೆಯಿಂದ ನಾಗೋಡಿ ಘಾಟಿಯತ್ತ ಸಾಗುತ್ತಿದ್ದ ಇನ್ಸುಲೆಟರ್ ವಾಹನದ ನಡುವೆ ಅಪಘಾತದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಜ್ಯೋತಿ ಹಾಗೂ ಅರಿಯಾ ಅನೂಪ್ ಎಂಬುವವರು ಮೃತಪಟ್ಟಿದ್ದಾರೆ. ಜೀಪು ಚಾಲಕ ಸೇರಿದಂತೆ ಗಾಯಗೊಂಡ ಇತರರನ್ನು ಕುಂದಾಪುರ ಹಾಗೂ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಕೇರಳದ ಪ್ರವಾಸಿಗರಾಗಿದ್ದು ಕೊಲ್ಲೂರಿನಿಂದ ಸ್ಥಳೀಯ ಜೀಪ್ ಮೂಲಕ ಕೊಡಚಾದ್ರಿಗೆ ತೆರಳಿ ಹಿಂದಿರುಗುವ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕೊಲ್ಲೂರು ಠಾಣೆ ಪಿಎಸ್ಐಗಳಾದ ವಿನಯ್ ಎಂ. ಕೊರ್ಲಹಳ್ಳಿ, ಭೀಮಾಶಂಕರ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಇನ್ಸುಲೇಟರ್ ವಾಹನ ಚಾಲಕ ಪರಾರಿಯಾಗಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










