ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ನೇರಳಕಟ್ಟೆಯ ಮನೆಯೊಂದರಲ್ಲಿ ಯಾರು ಇಲ್ಲದ ವೇಳೆ ಲಕ್ಷಾಂತರ ರೂ ಮೌಲ್ಯದ ಚಿನ್ನ ಬೆಳ್ಳಿಯನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಬ್ಬರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಿಜಯ ಶೆಟ್ಟಿ (32), ಅರ್ಜುನ ಪೂಜಾರಿ (29) ಎಂಬುವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮೊಹಮ್ಮದ್ ಅಶ್ರಫ್ ಎಂಬಾತನಿಗಾಗಿ ಹುಡುಕಾಟ ಮುಂದುವರಿದಿದೆ.
ಪ್ರಕರಣದ ವಿವರ:
ಮೇ.23ರಂದು ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ನಿರಂಜನ್ ಭಟ್ ಎಂಬವರ ಮನೆಯ ಬಾಗಿಲಿನ ಬೀಗ ಒಡೆದು ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ಹಣವನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಪ್ರಕರಣದ ತನಿಖೆಯನ್ನು ಹೆ.ಡಿ. ಕುಲಕರ್ಣಿ, ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ, ಹಾಗೂ ಸಂತೋಷ ಎ ಕಾಯ್ಕಿಣಿ, ಪೊಲೀಸ್ ವೃತ್ತ ನಿರೀಕ್ಷಕರು, ಕುಂದಾಪುರ ವೃತ್ತ ಅವರ ನೇತೃತ್ವದಲ್ಲಿ ನಿರಂಜನ್ ಗೌಡ, ಪೊಲೀಸ್ ಉಪ ನಿರೀಕ್ಷಕರು (ಕಾ.ಸು), ಚಂದ್ರಕಲಾ ಪತ್ತಾರ ಪೊಲೀಸ್ ಉಪ ನಿರೀಕ್ಷಕರು (ತನಿಖೆ) ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರಾದ ರಾಜು ಬಿ. ಮೌನೇಶ್, ಶ್ರೀಧರ್ ಪಾಟೀಲ್, ಕಿರಣ ಬಿ ಪಾಟೀಲ್, ಶಂಕರನಾರಾಯಣ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಜಯರಾಮ, ಅಮಾಸೆಬೈಲು ಪೊಲೀಸ್ ಠಾಣಾ ಸಿಬ್ಬಂದಿಯವರಾದ ಸುಧಾಕರ, ಚಂದ್ರ ಹಾಗೂ ಕುಂದಾಪುರ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಸಂತೋಷ, ಪ್ರಿನ್ಸ್, ಕೊಲ್ಲೂರು ಪೊಲೀಸ್ ಠಾಣೆಯ ನಾಗೇಂದ್ರ, ಬೈಂದೂರು ಪೊಲೀಸ್ ಠಾಣೆಯ ಚಿದಾನಂದ, ಮಾಳಪ್ಪರವರ ತಂಡ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತರಲ್ಲಿ ಆರೋಪಿ ಕಾಡೂರು ಗ್ರಾಮದ ಬಾಯರಬೆಟ್ಟುವಿನ ವಿಜಯ ಶೆಟ್ಟಿ(32), ಎಂಬಾತನನ್ನು ವಶಕ್ಕೆ ಪಡೆದು ಆಪಾದಿತನಿಂದ ಕಳವಾದ ಸ್ವತ್ತುಗಳಲ್ಲಿ ಸುಮಾರು 9 ಲಕ್ಷ ಮೌಲ್ಯದ 66.22 ಗ್ರಾಂ ಚಿನ್ನ & 175.4 ಗ್ರಾಂ ಬೆಳ್ಳಿಯನ್ನು ಹಾಗೂ 3ನೇ ಆರೋಪಿ ಕಾರ್ಕಳ ಇಂದಾರು ಗ್ರಾಮದ ಅರ್ಜುನ ಪೂಜಾರಿ (29) ಎಂಬಾತನನ್ನು ವಶಕ್ಕೆ ಪಡೆದು ಕಳವಾದ ಸ್ವತ್ತುಗಳಲ್ಲಿ ಸುಮಾರು 2 ಲಕ್ಷ ಮೌಲ್ಯದ 18.200 ಗ್ರಾಂ ಚಿನ್ನವನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ 1ನೇ ಆಪಾದಿತ ಮೊಹಮ್ಮದ್ ಅಶ್ರಫ್ ಎಂಬಾತನು ತಲೆ ಮರೆಸಿಕೊಂಡಿದ್ದು ಆತನನ್ನು ದಸ್ತಗಿರಿ ಮಾಡಲು ಬಾಕಿ ಇದ್ದು, ಪತ್ತೆ ಕಾರ್ಯ ಮುಂದುವರಿದಿದೆ.










