ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರದ ಪಾಂಡೇಶ್ವರ ಗ್ರಾ.ಪಂ ವ್ಯಾಪ್ತಿಯ ಬಿಜೆಪಿ ಶಕ್ತಿಕೇಂದ್ರಗಳ ಸಭೆ ಬುಧವಾರ ಸಾಸ್ತಾನದ ಶಿವಕೃಪಾ ಸಭಾಗ್ರಹದಲ್ಲಿ ನಡೆಯಿತು.
ಸಭೆಯಲ್ಲಿ ಪಾಂಡೇಶ್ವರ ವ್ಯಾಪ್ತಿಯ ಶಕ್ತಿಕೇಂದ್ರಗಳಿಗೆ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಯಿತು.
ಬಿಜೆಪಿ ಕ್ಷೇತ್ರಾಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಂಡೇಶ್ವರ ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಶಕ್ತಿ ಕೇಂದ್ರದ ನೂತನ ತಂಡ ಶ್ರಮಿಸಲಿ. ಮುಂದಿನ ದಿನಗಳಲ್ಲಿ ಶಕ್ತಿ ಕೇಂದ್ರ ವಾರು ಸದಸ್ಯತ್ವ ಅಭಿಯಾನ ಹಾಗೂ ಪೇಜ್ ಪ್ರಮುಖರ ನೇಮಕಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿಯ ಬಲ ತಳಮಟ್ಟದ ಸಂಘಟನೆಯಲ್ಲಿದೆ. ಬೂತ್ ಗೆದ್ದರೆ ಎಲ್ಲವನ್ನೂ ಗೆದ್ದಂತೆ. ಹಾಗಾಗಿ ಪ್ರತಿ ಬೂತ್‌ನಲ್ಲಿ ಯುವಕರು, ಮಹಿಳೆಯರು, ಹಿರಿಯರನ್ನು ಸೇರಿಸಿ ಸಮಿತಿ ಬಲಪಡಿಸಿ. ಸ್ಥಳೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಜನರ ವಿಶ್ವಾಸಗಳಿಸಿ. ಸಾಮಾಜಿಕ ಜಾಲತಾಣಗಳನ್ನು ಪಕ್ಷದ ಕೆಲಸಕ್ಕೆ ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಕೇಂದ್ರದ ಯೋಜನೆಗಳ ಫಲವನ್ನು ಪ್ರತಿ ಫಲಾನುಭವಿಗೆ ತಲುಪಿಸಿ. 2029ಕ್ಕೆ ಈಗಿಂದಲೇ ತಯಾರಿ ಆರಂಭಿಸಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್, ಕೋಟ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ಕೊತ್ತಾಡಿ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಐರೋಡಿ ವಿಠಲ ಪೂಜಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ, ಪಾಂಡೇಶ್ವರ ಶಕ್ತಿ ಕೇಂದ್ರದ ನಿಕಟ ಪೂರ್ವ ಅಧ್ಯಕ್ಷ ಸುರೇಶ್ ಪೂಜಾರಿ ಸೇರಿದಂತೆ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

















